‘ಸಿಂಗಾರೊದ ಸಿರಿ’ ತುಳು ಪ್ರೇಮ ಗೀತೆ…

'ನಮ್ಮ ಕೊಂಬಾರು' ಯೂ ಟ್ಯೂಬ್ ನಲ್ಲಿ ಬಿಡುಗಡೆ...

ಮಂಗಳೂರು: ತುಳು – ಕನ್ನಡ ಕವಿ ಮತ್ತು ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ಕಲ್ಲುರ್ಟಿ ಕಥನ’ ಗೀತ ಚಿತ್ರ ‘ನಮ್ಮ ಕೊಂಬಾರು’ ಯೂಟ್ಯೂಬ್ ವಾಹಿನಿಯಲ್ಲಿ ಅತೀ ಹೆಚ್ಚು ವೀಕ್ಷಕರನ್ನು ಹೊಂದಿ ಮುನ್ನಡೆಯುತ್ತಿರುವಂತೆ ಇದೀಗ ಅವರದೇ ಸಾಹಿತ್ಯವಿರುವ ತುಳು ಪ್ರೇಮ ಗೀತೆಯೊಂದನ್ನು ವಾಹಿನಿ ಬಿಡುಗಡೆಗೊಳಿಸಿದೆ. ಜ.25ರಂದು ರಥಸಪ್ತಮಿಯ ಶುಭದಿನ ‘ಸಿಂಗಾರೊದ ಸಿರಿ’ ಎಂಬ ಈ ತುಳು ಹಾಡನ್ನು ಅತ್ಯಾಕರ್ಷಕ ದೃಶ್ಯ ಸಂಯೋಜನೆಯೊಂದಿಗೆ ಜಾಲತಾಣದಲ್ಲಿ ಪ್ರಸಾರ ಮಾಡಲಾಗಿದೆ ಎಂದು ವಾಹಿನಿ ನಿರ್ದೇಶಕರಾದ ಬೆಂಗಳೂರಿನ ಹೈಕೋರ್ಟ್ ವಕೀಲ ಪ್ರವೀಣ್ ಕುಮಾರ್ ಕಟ್ಟೆ ತಿಳಿಸಿದ್ದಾರೆ.

ಗೀತಾ ಸಾಹಿತ್ಯ:
ಸುಂದರವಾದ ಹೆಣ್ಣಿನ ಬಿನ್ನಾಣದ ನಡಿಗೆಯೂ ಒಂದೊಮ್ಮೆ ನವಿಲಿನ ನಾಟ್ಯದಂತೆ ಭಾಸವಾಗುತ್ತದೆ. ಅವಳ ಮಧುರ ಸಾಂಗತ್ಯ ತನ್ನ ಜನ್ಮಾಂತರದ ಸುಯೋಗವೆಂದು ಪ್ರಿಯಕರ ಭಾವಿಸುತ್ತಾನೆ. ಆಕೆಯ ಸೀರೆ ಸೆರಗಿನ ತಂಪು ಗಾಳಿಗೆ ಸುತ್ತಲಿನ ಹೂ ಬನ ತೂಗಿ ತೊನೆಯುತ್ತದೆ. ಮುಖದ ಕಾಂತಿಯಲ್ಲಿ ಪೂರ್ಣ ಚಂದ್ರಮ ಉದಯಿಸಿ ಬಾನಗಲ ನಕ್ಷತ್ರ ಲೋಕವೇ ಕಾಣಿಸಿದೆ.
ರಾಜಾ ರವಿವರ್ಮ ತನ್ನ ಕುಂಚದಲ್ಲಿ ಚಿತ್ರಿಸಿದ ಸ್ವಪ್ನ ಸುಂದರಿ ಬಣ್ಣದೋಕುಳಿಯಲ್ಲಿ ಮಿಂದು ಬಂದಂತೆ, ಕವಿ ಕಾಳಿದಾಸನ ಕಾವ್ಯ ಕನ್ನಿಕೆ ಶಕುಂತಲೆ ಜೀವ ತುಂಬಿ ನಿಂದಂತೆ ತನ್ನೆದುರು ಮೈವಡೆದ ಪ್ರೇಯಸಿಯನ್ನು ಕಂಡು, ಅವಳೇನು ನಾಟ್ಯರಾಣಿ ಶಾಂತಲೆಯೋ ? ಅಲ್ಲ ದೇವಲೋಕದ ಅಪ್ಸರೆ ಸಾಕ್ಷಾತ್ ರಂಭೆಯೇನೋ !? ಎಂಬ ಭ್ರಮೆಯಲ್ಲಿರುವ ಆತ ಮನ್ಮಥನ ಶರಾಘಾತದಿಂದ ತತ್ತರಿಸಿ, ಸ್ವಯಂ ರತಿ ದೇವಿಯೇ ತನ್ನ ಮಂದಿರಕ್ಕೆ ಬಂದಳೆಂದು ಭ್ರಮಿಸುತ್ತಾನೆ.
‘ ಹಗಲಿರುಳು ನಿನ್ನ ಸುಂದರ ರೂಪು ನನ್ನ ಹೃದಯದಲ್ಲಿ ಕೋಲಾಹಲವನ್ನೇ ಉಂಟುಮಾಡಿದೆ. ಮನಸ್ಸೆಂಬ ಸಾಗರದಲ್ಲಿ ಅರಳಿದ ಪ್ರೀತಿ ತಾವರೆ ಸುತ್ತಲೂ ಸುಗಂಧ ಸೂಸಿ ತನ್ನೆದೆ ಬಡಿತ ತನನ ತನನನ ..ತಾಳ ಹಾಕುತ್ತಾ ಪಿಸುದನಿಯಲ್ಲಿ ಹಾಡುತ್ತಿರಬೇಕಾದರೆ ಕಾಲಗೆಜ್ಜೆಯ ಗಿಲಿ ಗಿಲಿ ನಾದದೊಂದಿಗೆ ನೀ ಕುಣಿಯುತ್ತಾ ಓಡಿ ಬರುವೆಯಾ ನಲ್ಲೆ ? ಬರಡಾದ ನನ್ನ ಬದುಕಿಗೆ ಪ್ರೀತಿಯ ಸವಿ ಸೇಚನ ನೀಡಿ ಸಂತೈಸಲಾರೆಯಾ!?’ ಎಂದು ಕನವರಿಸುವ ರಸಿಕ ಪ್ರೇಮಿ ತನ್ನ ಇನಿಯಳೊಂದಿಗೆ ಕಲ್ಪನಾ ಲೋಕದಲ್ಲಿ ವಿಹರಿಸುವ ಸುಂದರ ಪ್ರೇಮ ಕವನ ‘ಸಿಂಗಾರೊದ ಸಿರಿ’.

ಕವನದ ಸಾಲುಗಳು:

ಮಯಿರ್‌ ನಲಿಕೆದ ಪಜ್ಜೆ ಮಿನದನ ಸಿರಿಯೊ ಸಿಂಗರ ಪೊಣ್ಣನಾ|
ಏತೋ ಜನ್ಮೊದ ಜೋಗ ಎನ್ನವು ಸೇಲೆ ತೂಯೆನೆ ಸೋತೆನೇ ॥
ನಿನ್ನ ಮೇದಲೆ ಸಂಪು ಸುಯಿಲ್‌ಗ್ ತೂಂಕೊಂದುಂಡುಯ ಪೂಬನ|
ಮೋನೆದೈಸ್‌ರೊಡು ತಿಂಗೊಳುದಿತ್ಂಡ್ ಬಾನದಾರಗೆ ನೆಗತ್‌ಂಡ್‌ ॥ ೧ ॥

ರವಿವರ್ಮನ ಕಲ್ಪ ಕನ್ಯಗೆ ರಂಗ್‌ದೋಕುಳಿ ಗೊಬ್ಯಳಾ |
ಕಾಳಿದಾಸನ ಕಬಿತೆ ಪುತ್ಥೊಳಿ ಜೂವ ದಿಂಜಿದ್ ಉಂತ್ಯಳಾ ॥
ಶಾಂತಲೆನ ಸಿರಿ ಬಿಂಬೊನಾ ದೇವಸಿರಿ ಆ ರಂಬೆನಾ |
ಕಾಮ ಪಗರಿದ ಬಿರ್ದ್ ಮಾನವು ರತಿಯೆ ಬೂಡುಗು ಬತ್ತಿನಾ ॥ ೨ ॥

ಇರ್ಲ್ ಪಗೆಲ್‌ಡ್ ಕೊಲ್ತ್ ದುಂತಿನ ರೂಪೊ ನಿನ್ನವು ಉಡಲ್‌ಡ್|
ಅರ್ಲು ತಾಮರೆ ಪುರ್ಪ ಗಮೆಸ್ಂಡ್ ಮೋಕೆ ಪನ್ಪಿನ ಕಡಲ್‌ಡ್ ||
ತನನ ತನನನ ಪಾಡ್ದನ ಗೆಜ್ಜೆ ಗಿಲಿಗಿಲಿ ಧೀಂಗಣ |
ಈ ಬರಯನಾ ಕೈತಾಡೆಗ್ ಒರ ಕೊರಯನಾ ಸಬಿ ಬದ್‌ಕ್‌ಗ್ ||೩||
||ಮಯಿರ್ ನಲಿಕೆದ||

ನಿರ್ಮಾಣ ತಂಡ:
ಕವಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ರಚಿಸಿದ ಈ ಸುಂದರ ಪ್ರೇಮ ಗೀತೆಗೆ ಸಂಗೀತ ಸಂಯೋಜಿಸಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಧ್ವನಿಸುರುಳಿಯನ್ನಾಗಿ ಹೊರತಂದವರು ಗಾಯಕ ಗಂಗಾಧರ ಪಡುಬಿದ್ರಿ. ವಿಡಿಯೋ ನಿರ್ಮಾಣ ಮತ್ತು ಪ್ರಸ್ತುತಿ ಬೆಂಗಳೂರಿನ ಹಿರಿಯ ವಕೀಲ ಪ್ರವೀಣ ಕಟ್ಟೆ ಅವರದು. ದೃಶ್ಯ ಸಂಯೋಜನೆ ಮಾಡಿದವರು ಆರ್.ಪಿ.ಗ್ರಾಫಿಕ್ಸ್ ಬೆಂಗಳೂರು.
ಗಂಗಾ ಪ್ರತಿಷ್ಠಾನ ಕುಮಾರಪುರ ಅರ್ಪಿಸುವ ‘ಸಿಂಗಾರೊದ ಸಿರಿ’ ದೃಶ್ಯ ಕಾವ್ಯ ‘ನಮ್ಮ ಕೊಂಬಾರು ಸಂಸ್ಕೃತಿಯ ತೇರು’ ಯೂ ಟ್ಯೂಬ್ ವಾಹಿನಿಯಲ್ಲಿ ವೀಕ್ಷಣೆಗೆ ಲಭ್ಯವಿದ್ದು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಬ್ಸ್ ಸ್ಕೃಬ್ ಮಾಡಿ ಪ್ರೋತ್ಸಾಹಿಸಬೇಕಾಗಿ ನಿರ್ದೇಶಕ ಪ್ರವೀಣ್ ಅವರು ವಿನಂತಿಸಿದ್ದಾರೆ.

whatsapp image 2026 01 26 at 5.47.01 pm

whatsapp image 2026 01 26 at 5.47.01 pm (1)

whatsapp image 2026 01 26 at 5.47.02 pm (1)

Related Articles

Back to top button