ಅನ್ವೇಷಣಾ-2019 ಅಗ್ರಿ ಟಿಂಕರಿಂಗ್ ಫೆಸ್ಟ್ ಸಮಾರೋಪ…..

ಪುತ್ತೂರು: ಮಕ್ಕಳಲ್ಲಿನ ಅದ್ಭುತ ಪ್ರತಿಭೆಗಳನ್ನು ಗುರುತಿಸುವ ಕಾರ್ಯವಾಗಿದೆ. ಇದರಿಂದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರಂತಹ ವಿಜ್ಞಾನಿಗಳನ್ನು ವಿದ್ಯಾರ್ಥಿಗಳಲ್ಲಿ ಸೃಷ್ಟಿಸುವ ವೈಶಿಷ್ಟಪೂರ್ಣ ಕಾರ್ಯಕ್ರಮ ಇದಾಗಿದೆ. ಜೊತೆಗೆ ಅನ್ವೇಷಣಾ ಮನೋಭಾವವನ್ನು ಮಕ್ಕಳಿಂದ ಹಿಡಿದು ಹಿರಿಯವರ ತನಕ ಬೆಳೆಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದರು.
ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಅನ್ವೇಷಣಾ-2019 ರಾಜ್ಯಮಟ್ಟದ ಅಗ್ರಿ ಟಿಂಕರಿಂಗ್ ಫೆಸ್ಟ್‍ನ ಸಮಾರೋಪದಲ್ಲಿ ಮುಖ್ಯ ಅತಿಥಿಗಳಾಗಿ ಡಿ.೧ ರಂದು ಮಾತನಾಡಿದರು.
ದಕ್ಷಿಣಕನ್ನಡ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರವಿರಾಜ್ ಹೆಗ್ಡೆ ಮಾತನಾಡಿ, ಅನ್ವೇಷಣಾದಲ್ಲಿ ನವ ನವೀನ ಮಾದರಿಗಳಿಗೆ ಉತ್ತಮ ಮಾರುಕಟ್ಟೆ ಲಭ್ಯವಾಗುವಂತೆ ಮಾಡಿದೆ ಎಂದರಲ್ಲದೆ, ಮಂಗಳೂರಿನ ರಿಸರ್ಚ್ ಮತ್ತು ಡೆವಲಪ್ಮೆಂಟ್ ಫಂಡ್‍ಗಳ ಬಳಕೆ ಮತ್ತು ಪ್ರೋತ್ಸಾಹಕ್ಕಾಗಿ ಬಳಸುವ ಯೋಜನೆ ಬಗ್ಗೆ ತಿಳಿಸಿದರು.
ಲಘು ಉದ್ಯೋಗ ಭಾರತಿ ಕರ್ನಾಟಕ ಇದರ ಉಪಾಧ್ಯಕ್ಷ ಬಿ.ಎಸ್. ಶ್ರೀನಿವಾಸನ್ ಮಾತನಾಡಿ, ಅನ್ವೇಷಣ ಆಯೋಜನೆಗೆ ಧನ್ಯವಾದ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಮಾತನಾಡಿ, ಕೃಷಿಯ ಕಡೆಗೆ ವಿದ್ಯಾರ್ಥಿಗಳ ದೃಷ್ಟಿ ಸಾಗಲಿ. ಕೃಷಿಯ ಮಾದರಿಗಳು ಶೀಘ್ರವೇ ಮಾರುಕಟ್ಟೆಗೆ ಬರಲಿವೆ ಎಂಬ ಅಭಿಲಾಷೆಯೊಂದಿಗೆ ಇದು ರೈತರ ಬಾಳಿಗೆ ಬೆಳಕಾಗಲಿ ಎಂದು ಶುಭ ಹಾರೈಸಿದರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್‍ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಎರಡು ದಿನ ನಡೆದ ಅನ್ವೇಷಣಾ-2019ರ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳು ಉದ್ಯೋಗ ಹುಡುಕುವುದನ್ನು ಬಿಟ್ಟು ಉದ್ಯೋಗ ಸೃಷ್ಟಿಯನ್ನು ಮಾಡಬೇಕೆಂಬ ಆಶಯವೇ ಅನ್ವೇಷಣಾ-2019ಎಂದು ಹೇಳಿದರು.
ಶಾಲಾ ಆಡಳಿತ ಮಂಡಳಿ ಸದಸ್ಯರಾದ ವಸಂತಿ ಕೆದಿಲ ಅವರು ಸ್ವಾಗತಿಸಿದರು. ಶಿಕ್ಷಕಿಯರಾದ ಸುಗಿತಾ ರೈ, ಶಾಂತಿ ಹಾಗೂ ದೀಪ್ತಿ ಭಟ್ ವಿಜೇತರ ಪಟ್ಟಿಯನ್ನು ವಾಚಿಸಿದರು. ದತ್ತು ಸ್ವೀಕಾರದ ಪಟ್ಟಿಯನ್ನು ಭರತ್ ಪೈ ಅವರು ನೀಡಿದರು. ಕಾರ್ಯಕ್ರಮವನ್ನು ಸೌಮ್ಯ ಹಾಗೂ ಯಶೋಧ ನಿರೂಪಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button