ಪುತ್ತೂರು – ವಿಶ್ವ ವಿಕಲಚೇತನರ ದಿನಾಚರಣೆ….
ಪುತ್ತೂರು: ವಿಕಲಚೇತನರು ಸಾಮಾನ್ಯರಂತೆ ಸಮಾನರಾಗಿದ್ದು, ಕೇವಲ ಅಂಗ ವೈಕಲ್ಯದ ಕಾರಣಕ್ಕೆ ಅವರಲ್ಲಿ ತಾರತಮ್ಯ ಧೋರಣೆ ಮಾಡದೆ ಅವರಿಗೆ ಜೀವನದ ದಾರಿಯನ್ನು ತೋರಿಸಬೇಕಾಗಿರುವುದು ಸಮಾಜದ ಅಗತ್ಯತೆಯಾಗಿದೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಹೇಳಿದರು.
ಅವರು ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ನಗರದ ನೆಲ್ಲಿಕಟ್ಟೆ ಕ್ಷೇತ್ರ ಸಂಪನ್ಮೂಲ ಕೇಂದ್ರದ ಆವರಣದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ, ವಿಶೇಷ ಅಗತ್ಯವುಳ್ಳ ಮಕ್ಕಳ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ `ಅವಕಾಶ-2019’ದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು
ವಿಶೇಷ ಅಗತ್ಯವುಳ್ಳ ಮಕ್ಕಳ ಜಿಲ್ಲಾ ಮಟ್ಟದ ಕ್ರೀಡಾಕೂಟವು ಪುತ್ತೂರಿನಲ್ಲಿಯೇ ನಡೆಯಲಿದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರವನ್ನು ತಾ.ಪಂನಿಂದ ಒದಗಿಸಲು ಪ್ರಯತ್ನಿಸುವುದಾಗಿ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಟೋಪಿ ತೊಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರ ಸಭಾ ಪೌರಾಯುಕ್ತೆ ರೂಪಾ ಶೆಟ್ಟಿ ಮಾತನಾಡಿ, ವಿಕಲಚೇತನ ವಿದ್ಯಾರ್ಥಿಗಳಲ್ಲಿಯೂ ಉತ್ತಮ ಪ್ರತಿಭೆಗಳಿವೆ. ಅಂತಹ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಾಗ ಅವರೂ ಸಾಮಾನ್ಯರಂತೆ ಬೆಳೆಯಲು ಸಾಧ್ಯ ಎಂದರು.
ಕ್ಷೇತ್ರ ಸಂಪನ್ಮೂಲಕ ಕೇಂದ್ರ ಸಮನ್ವಯಾಧಿಕಾರಿ ಮೋನಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸಹನಾ ಭವಿನ್, ಅಕ್ಷರದಾಸೋಹದ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಸಂದರ್ಭೋಚಿತವಾಗಿ ಮಾತನಾಡಿದರು. ತಾಲೂಕು ದೈಕ್ಷಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಿಕ್ಷಕ ಶಿವಪ್ಪ ರಾಥೋಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಕಲಚೇತನರಾಗಿ ಸ್ವ ಉದ್ಯೋಗ ನಡೆಸುತಿರುವ ಸಂಜೀವಿ ಗಾಣಿಗರವರನ್ನು ಸನ್ಮಾನಿಸಲಾಯಿತು.
ಸಮನ್ವಯಾಧಿಕಾರಿ ಮೋನಪ್ಪ ಪೂಜಾರಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಬಿಆರ್‍ಪಿ ದಿನೇಶ್ ಮಾಚಾರ್ ಕಾರ್ಯಕ್ರಮ ನಿರೂಪಿಸಿದರು ಬಿಐಆರ್‍ಟಿ ತನುಜಾ ವಂದಿಸಿದರು.