ಬಟ್ಟೆ ಅಂಗಡಿಗಳನ್ನು ತೆರೆಯುವುದಕ್ಕೆ ಅನುಮತಿ – ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟ ಖಂಡನೆ…..

ಮಂಗಳೂರು : ದ.ಕ.ಜಿಲ್ಲೆಯಲ್ಲಿ ಪ್ರತಿ ದಿನವೂ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಮತ್ತು ಜಿಲ್ಲಾಡಳಿತವು ನಾಳೆಯಿಂದ ಬಟ್ಟೆ, ಫ್ಯಾನ್ಸಿ ಹಾಗೂ ಪಾದರಕ್ಷೆಗಳ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡುತ್ತಿರುವುದು ಅತ್ಯಂತ ವಿಪರ್ಯಾಸದ ಸಂಗತಿಯಾಗಿದೆ. ಈ ತೀರ್ಮಾನವನ್ನು ದ.ಕ ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ಖಂಡಿಸುತ್ತಿದ್ದೇವೆ ಎಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಕೆ. ಅಶ್ರಫ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈದುಲ್ ಫಿತ್ರ್ ಹಬ್ಬ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಈ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ಕೊಟ್ಟರೆ ಜನಸಂದಣಿಯನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಈ ಜನಸಂದಣಿಯ ಕಾರಣ ಕೊರೋನ ಸೋಂಕು ಹರಡುವ ಭೀತಿ ಇದೆ ಆದುದರಿಂದ ಬಟ್ಟೆ, ಫ್ಯಾನ್ಸಿ ಮತ್ತು ಪಾದರಕ್ಷೆಯ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡಬಾರದು ಎಂದು ನಾವು ಮತ್ತು ಉಡುಪಿ ಖಾಝಿಯವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಿ ಅನುಮತಿ ನೀಡಿರುವುದು ಇಡೀ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಜಿಲ್ಲಾಡಳಿತದ ಈ ಅಚಾತುರ್ಯದಿಂದ ಕೊರೋನ ಹರಡಿದರೆ ಇದರ ಸಂಪೂರ್ಣ ಹೊಣೆಯನ್ನು ಇಲ್ಲಿನ ಸಂಸದರು, ಉಸ್ತುವಾರಿ ಸಚಿವರು, ಶಾಸಕರು ಮತ್ತು ಜಿಲ್ಲಾಡಳಿತ ಹೊರಬೇಕಾಗಿದೆ.
ಈಗಾಗಲೇ ದೆಹಲಿಯಲ್ಲಿ ನಡೆದ ಮುಸ್ಲಿಂ ಸಮಾವೇಶದಲ್ಲಿ ತಬ್ಲೀಕ್ ಜಮಾತ್ ನವರು ಭಾಗವಹಿಸಿದ ಕಾರಣ ದುರದೃಷ್ಟವಶಾತ್ ಕೆಲವು ಕಡೆ ಕೊರೋನ ಹಬ್ಬಿದಾಗ ಮುಸ್ಲಿಂ ಸಮುದಾಯವನ್ನೇ ದೂರಲಾಗಿದೆ. ಇನ್ನು ಈದ್‌ ಹಬ್ಬದ ಸಂದರ್ಭ ಕೊರೊನಾ ಮುಸ್ಲಿಮರಿಗೆ ಕೊರೊನಾ ಬಾಧಿಸಿದರೆ ಇನ್ನಷ್ಟು ಮುಸ್ಲಿಮರನ್ನೇ ದೂರುವುದರಲ್ಲಿ ಸಂಶಯ ಇಲ್ಲ. ಅಷ್ಟೇ ಅಲ್ಲದೇ ಇಷ್ಟರವರೆಗೆ ನಾವು ಮಾಡಿದ ಜಾಗ್ರತೆ ಸಂಪೂರ್ಣ ವ್ಯರ್ಥವಾಗಲಿದೆ ಎಂದು ಅಶ್ರಫ್ ತಿಳಿಸಿದ್ದಾರೆ.

ಸೋಂಕು ನಿಯಂತ್ರಣದಲ್ಲಿ ಮುಸ್ಲಿಂ ಸಮುದಾಯ ಈವರೆಗೆ ಸರ್ಕಾರದ ಎಲ್ಲಾ ಕ್ರಮಗಳಿಗೂ ಬದ್ಧವಾಗಿ ನಡೆದು ಸಹಕರಿಸಿದೆ. ಪವಿತ್ರ ರಂಜಾನ್ ತಿಂಗಳಾದರೂ ನಮಾಝ್‌ಗಳನ್ನು ಮನೆಯಲ್ಲಿಯೇ ನಿರ್ವಹಿಸಲಾಗಿದೆ. ಅದೇ ರೀತಿ ನಮ್ಮ ಸಹೋದರ ಸಮುದಾಯದವರಾದ ಹಿಂದುಗಳು, ಕ್ರೈಸ್ತರು, ಜೈನರು ಎಲ್ಲರೂ ಕೂಡಾ ಈ ನಾಡಿನ ಹಿತದೃಷ್ಠಿಯಲ್ಲಿ ದೇವರ ಆರಾಧನೆಯನ್ನು ಮನೆಯಲ್ಲಿಯೇ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರ ವೈನ್ ಶಾಪ್‌ಗಳನ್ನು ತೆರೆಯಲು ಅವಕಾಶ ಕೊಟ್ಟು ಜನರನ್ನು ಗುಂಪು ಸೇರಿ ಸಾರಾಯಿ ಕುಡಿಯುವಂತೆ ಮಾಡಿರುವುದು ಅತ್ಯಂತ ಹಾಸ್ಯಾಸ್ಪದ. ಅದೇ ರೀತಿ ಇದೀಗ ಕೆಲವು ಬಂಡವಾಳಶಾಹಿ ಬಟ್ಟೆ ವ್ಯಾಪಾರಿಗಳ ಒತ್ತಡಕ್ಕೆ ಮಣಿದು ಜವಲಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿರುವುದು ಕೊರೋನವನ್ನು ಕೈ ಬೀಸಿ ಕರೆಯುತ್ತಿರುವಂತೆ ಭಾಸವಾಗುತ್ತಿದೆ. ಆದುದರಿಂದ ಜಿಲ್ಲಾಡಳಿತವು ತನ್ನ ನಿರ್ಧಾರವನ್ನು ಬದಲಿಸಬೇಕು ಎಂದು ಮಾಜಿ ಮೇಯರ್ ಕೆ.ಅಶ್ರಫ್ ರವರು ಒತ್ತಾಯಿಸಿದ್ದಾರೆ.

ಒಂದು ವೇಳೆ ಈ ಅಂಗಡಿಗಳು ತೆರೆದಲ್ಲಿ ಮುಸ್ಲಿಂ ಬಾಂಧವರು ಜಾಗ್ರತೆ ವಹಿಸಬೇಕು. ಕೊರೋನಾಕ್ಕೆ ಜನರು ಬಲಿಯಾಗುತ್ತಿರುವಾಗ ಈ ಬಾರಿಯ ಈದ್ ಹಬ್ಬವನ್ನು ಬಹಳ ಸರಳವಾಗಿ ಆಚರಿಸಬೇಕು. ಯಾವುದೇ ಕಾರಣಕ್ಕೂ ಈದ್ ಹಬ್ಬದ ಖರೀದಿಗಾಗಿ ಅಂಗಡಿಗಳಲ್ಲಿ ಮುಗಿಬೀಳಬಾರದು. ಈ ನಾಡಿನ ಸಂರಕ್ಷಣೆಗಾಗಿ ದೃಢ ಸಂಕಲ್ಪ ಮಾಡಬೇಕಾಗಿದೆ ಎಂದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button