ಶ್ರೀ ಮಧ್ವಾಷ್ಟೋತ್ತರ ಶತನಾಮಾವಳಿ- ಪರ್ಯಾಯ ಶ್ರೀಗಳಿಂದ ಧ್ವನ್ಯಡಕ ಲೋಕಾರ್ಪಣೆ…

ಉಡುಪಿ: ಆಚಾರ್ಯ ಮಧ್ವರ ಜೀವನ ವೃತ್ತಾಂತದ ಅನುಕ್ರಮವನ್ನು ಆಧರಿಸಿದ ಶ್ರೀ ಮಧ್ವಾಷ್ಟೋತ್ತರ ಶತನಾಮಾವಳಿಯ ಧ್ವನಿಮುದ್ರಿಕೆಯನ್ನು ಪರ್ಯಾಯ ಶ್ರೀ ಪುತ್ತಿಗೆ ಮಠದ ಡಾ| ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಧ್ವನವಮಿಯಂದು ಲೋಕಾರ್ಪಣೆಗೊಳಿಸಿದರು.
ಪಲಿಮಾರು ಮಠದ 24ನೇ ಪೀಠಾಧಿಪತಿಗಳಾದ ಶ್ರೀ ಶ್ರೀ ರಘುಪ್ರವೀರ ತೀರ್ಥರು ರಚಿಸಿರುವ ಈ ನಾಮಾವಳಿಯನ್ನು ಸಾಮೂಹಿಕ ಪಾರಾಯಣಕ್ಕೆ ಅನುಕೂಲವಾಗುವಂತೆ ಬೆಂಗಳೂರಿನ ತೌಳವ ಮಾಧ್ವ ಒಕ್ಕೂಟ ಧ್ವನಿ ಮುದ್ರಿಸಿದ್ದು, ಪ್ರತೀ ಭಾನುವಾರ ಬೆಳೆಗ್ಗೆ 10 ಗಂಟೆಗೆ ಮತ್ತು ಸಂಜೆ 5 ಗಂಟೆಗೆ ಶ್ರೀ ಕೃಷ್ಣ ಮಠದ ಮಧ್ವಮಂಟಪದಲ್ಲಿ ಸಾಮೂಹಿಕ ಪಾರಾಯಣಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀಗಳು ಪ್ರಕಟಿಸಿದರು. ಆಚಾರ್ಯ ಮಧ್ವರ ಕುರಿತ ಯಾವುದೇ ರೀತಿಯ ಚಟುವಟಿಕೆಗಳಿಗೆ ಪೂರ್ಣ ಸಹಕಾರ ನೀಡುವುದಾಗಿ ಶ್ರೀಗಳು ಆಶೀರ್ವಚಿಸಿದರು.
ಒಕ್ಕೂಟದ ಪ್ರತಿನಿಧಿ ಮತ್ತು ಸಾಮೂಹಿಕ ಪಾರಾಯಣ ಪ್ರಭಾರಿ ವೆಂಕಟೇಶ್ ಭಟ್, ಶ್ರೀಗಳ ಆಪ್ತ ಕಾರ್ಯದರ್ಶಿ ಶ್ರೀ ರತೀಶ್ ತಂತ್ರಿ, ಕೋಟಿ ಗೀತಾ ಲೇಖನ ಯಜ್ಞ ಸಂಕರ್ಷಣ ಪ್ರಖಂಡದ ಪೂರ್ಣಾವಧಿ ಪ್ರಚಾರಕ ಶ್ರೀ ರಮಣಾಚಾರ್ಯ, ಅಂತರ್ಯಾಮಿಯ ಶ್ರೀ ಪ್ರಮೋದ್ ಸಾಗರ್, ಶ್ರೀ ಅನಂತಕೃಷ್ಣ ಪ್ರಸಾದ್, ಶ್ರೀ ವಿಕ್ರಂ ಕುಂಟಾರು, ಅಖಂಡ ಗೀತಾ ಪಾರಾಯಣ ಪ್ರಭಾರಿಗಳಾದ ಶ್ರೀಮತಿ ಉಮಾ ಪ್ರಸಾದ್, ಶ್ರೀಮತಿ ಶೋಭಾ ಪ್ರಮೋದ್ ಮತ್ತಿತರು ಉಪಸ್ಥಿತರಿದ್ದರು.
ಈ ಉಚಿತ ಧ್ವನಿಮುದ್ರಿಕೆ ಮತ್ತು ಪಠ್ಯ ಹಾಗೂ ಸಾಮೂಹಿಕ ಪಾರಾಯಣಕ್ಕಾಗಿ 8792158946 ಅಥವಾ 9845960418 ನ್ನು ಸಂಪರ್ಕಿಸಲು ಶ್ರೀ ಮಠದ ಪ್ರಕಟಣೆ ತಿಳಿಸಿದೆ.

ಬೆಂಗಳೂರು ವರದಿ:- ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಗೋವರ್ಧನ ಕ್ಷೇತ್ರ ಪುತ್ತಿಗೆ ಮಠದಲ್ಲಿ ತೌಳವ ಮಾಧ್ವ ಒಕ್ಕೊಟದ ಸಹಯೋಗದೊಂದಿಗೆ ಶ್ರೀ ಮಧ್ವನವಮಿಯನ್ನು ಆಚರಿಸಲಾಯಿತು. ಸಾಮೂಹಿಕ ಭಜನೆ, ವಾಯುಸ್ತುತಿ ಪುನಶ್ಚರಣೆ, 108 ತುಪ್ಪದ ದೀಪಗಳನ್ನು ಬೆಳಗಿ ಮಧ್ವಾಚಾರ್ಯರನ್ನು ಸ್ಮರಿಸಲಾಯಿತು. ವಿಶೇಷ ಉಪನ್ಯಾಸ ನೀಡಿದ ವಿದ್ವಾನ್ ಶ್ರೀಕಾಂತ ಬಾಯಾರಿ ಸಾಮೂಹಿಕ ಮಧ್ವಾಷ್ಟೋತ್ತರ ಶತನಾಮಾವಳಿ ಪಾರಾಯಣದ ನೇತೃತ್ವ ವಹಿಸಿದ್ದರು. ತೌಳವ ಮಾಧ್ವ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು,ಮಠದ ಆಡಳಿತ ಮಂಡಳಿ, ಗೋವರ್ಧನ ಭಜನಾ ಮಂಡಳಿಯ ಭಜಕರು,ಭಕ್ತರು ಭಾಗವಹಿಸಿದ್ದರು.

ಕುಶಾಲನಗರದಲ್ಲಿ ಸೋಮವಾರ ಮಧ್ವನವಮಿಯನ್ನು ಆಚರಿಸಲಾಗುತ್ತಿದ್ದು ಸಾಮೂಹಿಕ ಮಧ್ವಾಷ್ಟೋತ್ತರ ಶತನಾಮಾವಳಿ ಪಾರಾಯಣಕ್ಕೆ ಸಿದ್ಧತೆಗಳನ್ನು ನಡೆಸಲಾಗಿದೆ.

Sponsors

Related Articles

Back to top button