ಭಾವಿ ಪರ್ಯಾಯ ಶ್ರೀಪುತ್ತಿಗೆ ಶ್ರೀಪಾದರ ಮುಂಬೈ ಸಂಚಾರದ ಸಮಾಲೋಚನಾ ಸಭೆ…
ಮುಂಬೈ: ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುಗುಣೇಂದ್ರತೀರ್ಥಶ್ರೀಪಾದಂಗಳವರು ತಮ್ಮ ಶಿಷ್ಯರಾದ ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದಂಗಳವರೊಡನೆ ಮುಂದಿನ ತಿಂಗಳು ಅಕ್ಟೋಬರ್ ದಿನಾಂಕ 7 ರಿಂದ 13 ರ ವರೆಗೆ ಮುಂಬೈ ಮಹಾನಗರದಲ್ಲಿರುವ ಪರ್ಯಾಯ ಸಂಚಾರತ್ವೇನ ವಾಸ್ತವ್ಯವನ್ನು ಮಾಡಿ ಭಕ್ತರನ್ನು ಅನುಗ್ರಹಿಸುವರಿದ್ದಾರೆ. ಈ ಹಿನ್ನೆಲೆಯಲ್ಲಿ ಪರಮಪೂಜ್ಯ ಶ್ರೀಪಾದರ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಅಂಧೇರಿಯ ಶ್ರೀ ಅದಮಾರು ಮಠದಲ್ಲಿ ಸಮಾಲೋಚನಾ ಸಭೆಯಲ್ಲಿ ನಿರ್ಣಯಿಸಲಾಯಿತು.
ಸೆ. 7 ರಂದು ಶನಿವಾರ ಸಂಜೆ ಸಾಯನ್ ನ ಗೋಕುಲದಲ್ಲಿ ಅತ್ಯಂತ ವೈಭವದಿಂದ ಹಾಗೂ ಸಾಂಪ್ರದಾಯಿಕವಾಗಿ ಶೋಭಾಯಾತ್ರೆಯೊಂದಿಗೆ ಸ್ವಾಗತಿಸಲಾಗುವುದು. ದಿನಾಂಕ 13 ಶುಕ್ರವಾರದಂದು ಸಂಜೆ ಶ್ರೀ ಅದಮಾರು ಮಠದಲ್ಲಿ ಭವ್ಯವಾದ ತುಲಾಭಾರದೊಂದಿಗೆ ಪೌರಸನ್ಮಾನವನ್ನು ಮಾಡಲು ನಿರ್ಧರಿಸಲಾಯಿತು. ಹಿರಿಯರ ವಿದ್ವಾಂಸರಾದ ಶ್ರೀ ನಾಗರಹಳ್ಳಿ ಪ್ರಹ್ಲಾದಾಚಾರ್ಯ ಮಾರ್ಗದರ್ಶನದೊಂದಿಗೆ ನಡೆದ ಈ ಸಭೆಯಲ್ಲಿ ಶ್ರೀಮಠದ ದಿವಾನರಾದ ಶ್ರೀನಾಗರಾಜ ಆಚಾರ್ಯರು ಶ್ರೀಮಠದ ಪರ್ಯಾಯದ ಯೋಜನೆಗಳನ್ನು ವಿವರಿಸಿದರು. ಈ ಸಭೆಯಲ್ಲಿ , ಶ್ರೀ ಅದಮಾರು ಮಠದ ಅಧಿಕಾರಿಗಳಾದ ಶ್ರೀ ರಾಜೇಶ ಭಟ್, B S.K.B.A ಅಧ್ಯಕ್ಷರಾದ ಡಾ . ಸುರೇಶ್ ರಾವ್, ಹಿರಿಯ ವಕೀಲರಾದ ಶ್ರೀ ಎನ್ ಆರ್ ರಾವ್, ಪ್ರಸಿದ್ಧ ಉದ್ಯಮಿಗಳಾದ ವಿರಾರ್ ಶಂಕರ್ ಶೆಟ್ಟಿ, ಲೆಕ್ಕಪರಿಶೋಧಕರಾದ ಶ್ರೀ ಸುಧೀರ್ ಶೆಟ್ಟಿ, ಪ್ರಸಿದ್ಧ ವಿದ್ವಾಂಸರಾದ ಶ್ರೀ ಕೈರಬೆಟ್ಟು ವಿಶ್ವನಾಧ ಭಟ್, ಡೋಂಬಿವಲಿ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಮುಖ್ಯಸ್ಥರಾದ ಶ್ರೀ ರಾಘವೇಂದ್ರ ಜಮದಗ್ನಿ, ಹಿರಿಯರಾದ ರಾಧಾಕೃಷ್ಣ ಆಚಾರ್ಯ, ಉದ್ಯಮಿಗಳಾದ ಗುರುಪ್ರಸಾದ್ ಹಾಗೂ ಪ್ರಮುಖ ಮಠಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಡಾ.ಬಿ.ಗೋಪಾಲಾಚಾರ್ಯರು ಕಾರ್ಯಕ್ರಮ ನಿರೂಪಿಸಿದರು.
ಕೋಟಿಗೀತಾ ಲೇಖನ ಯಜ್ಞದ ಪ್ರಚಾರಕರಾದ ಶ್ರೀ ರಮಣ ಆಚಾರ್ಯರು ಪ್ರಾರ್ಥಿಸಿದರು. ಚೆನ್ನೈನ ಶ್ರೀಪುತ್ತಿಗೆ ಮಠದ ಅಧಿಕಾರಿಗಳಾದ ನಾರಾಯಣ ಆಚಾರ್ಯರು ಸಭೆಯ ಉದ್ದೇಶವನ್ನು ವಿವರಿಸಿದರು.