ಮೈತ್ರೇಯಿ ಗುರುಕುಲದಲ್ಲಿ ಪರಮೇಶ್ವರಿ ಅಮ್ಮ ಕುಟಿ ಪ್ರವೇಶೋತ್ಸವ…
ಲೌಕಿಕ ಶಿಕ್ಷಣದೊಂದಿಗೆ ಆಧ್ಯಾತ್ಮಿಕ ಶಿಕ್ಷಣ ಅಗತ್ಯ : ಸದ್ಗುರು ಮಧುಸೂದನ ಸಾಯಿ...
ಬಂಟ್ವಾಳ: ತ್ಯಾಗ ಜೀವಿಗಳಿಂದ ಮತ್ತು ಯೋಗಿಗಳಿಂದ ಸಮಾಜದಲ್ಲಿ ಅನೇಕ ಸಂಸ್ಥೆಗಳು ಅಭಿವೃದ್ಧಿ ಹೊಂದುತ್ತವೆ. ಶಿಕ್ಷಣ ಸಂಸ್ಥೆಗಳಲ್ಲಿ ಲೌಕಿಕ ಶಿಕ್ಷಣದೊಂದಿಗೆ ಆಧ್ಯಾತ್ಮಿಕ ಶಿಕ್ಷಣವು ದೊರೆತಾಗ ಭಾರತೀಯ ಸಂಸ್ಕೃತಿ ಉಳಿಯುತ್ತದೆ. ಸಮಾಜ ಸೇವೆಯಲ್ಲಿ ಎಲ್ಲರೂ ತೊಡಗಿಸಿಕೊಂಡು ಜೀವನ ತ್ಯಾಗಮಯವಾಗಲಿ. ವಿದ್ಯೆ ಮತ್ತು ಆರೋಗ್ಯ ಎಲ್ಲರಿಗೂ ಉಚಿತವಾಗಿ ಸಿಗುವಂತಾಗಲು ತ್ಯಾಗದಿಂದ ಮಾತ್ರ ಸಾಧ್ಯ ಎಂದು ಚಿಕ್ಕಬಳ್ಳಾಪುರದ ಸದ್ಗುರು ಶ್ರೀ ಮಧುಸೂದನ ಸಾಯಿ ಮುದ್ದೇನ ಹಳ್ಳಿ ಹೇಳಿದರು.
ಅವರು ಫೆ. 15 ರಂದು ನಡೆದ ವಿಟ್ಲ ಸಮೀಪದ ಮೂರ್ಕಜೆ ಮೈತ್ರೇಯಿ ಗುರುಕುಲದಲ್ಲಿ ನೂತನವಾಗಿ ನಿರ್ಮಾಣವಾದ ಪರಮೇಶ್ವರೀ ಅಮ್ಮ ಕುಟಿಯ ಪ್ರವೇಶೊತ್ಸವ ಸಮಾರಂಭದಲ್ಲಿ ಭಾಗವಹಿಸಿ ಶುಭಾಶೀರ್ವಾದ ನೀಡಿದರು.
ಮುದ್ದೇನ ಹಳ್ಳಿಯಿಂದ ಖಾಸಗಿ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಮಧುಸೂದನ ಸಾಯಿಯವರು ಮೈತ್ರೇಯಿ ಗುರುಕುಲದ ಪರಿಸರವನ್ನು ವೀಕ್ಷಿಸಿ ವಿದ್ಯಾರ್ಥಿಗಳ ಶಿಕ್ಷಣ ವ್ಯವಸ್ಥೆ , ವೇದಾಧ್ಯಯನ, ಸಂಸ್ಕೃತ ಭಾಷೆಯ ಕಲಿಕೆ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದರು.
ವರಾಹಮಿಹಿರ ಉನ್ನತ ಸಂಶೋಧನಾ ಕೇಂದ್ರ ನಿರ್ದೇಶಕ ಡಾ. ರಾಮಚಂದ್ರ ಭಟ್ ಕೋಟೆ ಮನೆ, ನಿವೃತ್ತ ಪ್ರಾಂಶುಪಾಲ ಕೆ. ಸಂಜೀವ ಶೆಟ್ಟಿ ಮುದೇಶನ ಹಳ್ಳಿ, ತ್ಯಾಗಜೀವಿ ಮಹೇಂದ್ರ ಹೆಗ್ಡೆ ಮುದ್ದೇಶನ ಹಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಖಿಲ ಭಾರತ ಕಾರ್ಯಕಾರಿಣೀ ಸದಸ್ಯ ಕಜಂಪಾಡಿ ಸುಬ್ರಮಣ್ಯ ಭಟ್ ಪ್ರಸ್ತಾವನೆ ಗೈದರು. ಪರಮೇಶ್ವರೀ ಅಮ್ಮನವರು ದಾನ ಮಾಡಿದ ಸ್ಥಳದಲ್ಲಿ ಅಜೇಯ ವಿಶ್ವಸ್ಥ ಮಂಡಳಿ ಮೈತ್ರೇಯಿ ಗುರುಕುಲ ಕಾರ್ಯನಿರ್ವಹಿಸುತ್ತಿದೆ. ಅವರ ನೆನಪಿಗಾಗಿ ಪರಮೇಶ್ವರೀ ಅಮ್ಮ ಕುಟಿಯನ್ನು ದಾನಿಗಳ ಸಹಕಾರದಿಂದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರ ನೇತೃತ್ವದಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು.
ಮುದ್ದೇನಹಳ್ಳಿ ವಿಶ್ವವಿದ್ಯಾನಿಲಯ ಕುಲಪತಿ ಬಿ.ಎನ್.ನರಸಿಂಹ ಮೂರ್ತಿ ಮಾತನಾಡಿ ಸತ್ಯಸಾಯಿಬಾಬರ ಬಳಿಕ ಸದ್ಗುರು ಮಧುಸೂದನ ಸಾಯಿಯವರು ಹಲವು ಶಿಕ್ಷಣ ಸಂಸ್ಥೆ ಹಾಗೂ ಸಮಾಜಸೇವಾ ಕಾರ್ಯವನ್ನು ಮುನ್ನಡೆಸುತ್ತಿದ್ದಾರೆ ಎಂದರು.
ಶ್ರೀ ಸೀತಾರಾಮ ಕೆದಿಲಾಯ , ಶ್ರೀ ಮೋಹನದಾಸ ಸ್ವಾಮೀಜಿ ಮಾಣಿಲ, ಡಾ, ಪ್ರಭಾಕರ ಭಟ್ ಕಲ್ಲಡ್ಕ, ಡಾ. ಕಮಲಾ ಭಟ್, ಪ್ರದೀಪ ಕುಮಾರ್ ಕಲ್ಕೂರ , ದಾ.ಮ.ರವೀಂದ್ರ ,ರಂಗಮೂರ್ತಿ ,ಗಜಾನನ ಪೈ, ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿಯರಿಂದ ವೇದಘೋಷದ ಬಳಿಕ ಭಗಿನಿ ಪಲ್ಲವೀ ಸ್ವಾಗತಿಸಿದರು.ವಿದ್ಯಾರ್ಥಿನಿಯರು ವಿನಾಯಕ ಸ್ತುತಿ, ಲವ-ಕುಶ ನಾಟಕ, ಯೋಗನೃತ್ಯ ಸಮನ್ವಯ ಕಾರ್ಯಕ್ರಮ ನಡೆಸಿಕೊಟ್ಟರು. ಭಗಿನಿ ರಂಜನೀ ಅನುಭವ ಕಥನ ಹೇಳಿದರು. ಭಗಿನಿ ವನಜಾ ನಿರೂಪಿಸಿದರು. ಅಜೇಯ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿ ರೂಪಲೇಖಾ ವಂದಿಸಿದರು.