ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯೋಗ ದಿನಾಚರಣೆ…
ಪುತ್ತೂರು: ನಮ್ಮ ಮನಸ್ಸು ಮತ್ತು ಶರೀರ ಬಲಗೊಂಡಷ್ಟು ಋಣಾತ್ಮಕ ಭಾವನೆಗಳು ಕಡಿಮೆಯಾಗುತ್ತವೆ. ಆಗ ಮನಸ್ಸು ಸಂತುಲಿತವಾಗಿ ಶಕ್ತಿಪೂರ್ಣವಾಗುತ್ತದೆ ಎಂದು ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ 6ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಯೋಗ ಇಂದು ವಿಶ್ವವ್ಯಾಪಿಯಾಗಿದೆ, ವಿದೇಶಗಳೂ ಅದರ ಮಹತ್ವವನ್ನು ಅರಿತಿವೆ. ಯಾವುದೇ ವ್ಯತಿರಿಕ್ತ ಪರಿಣಾಮಗಳಿಲ್ಲದ ಯೋಗವನ್ನು ಎಲ್ಲರೂ ಅಭ್ಯಸಿಸಿ ಆರೋಗ್ಯವಂತರಾಗಬೇಕೆಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಗ ಶಿಕ್ಷಣ ಸಂಯೋಜಕ ಚಂದ್ರಶೇಖರ್ ಮಾತನಾಡಿ, ಯಾಂತ್ರಿಕ ಜಗತ್ತಿನಲ್ಲಿ ನಿರಂತರ ಕೆಲಸ ಮತ್ತು ಒತ್ತಡದಿಂದ ಪ್ರತಿಯೊಬ್ಬರೂ ದಣಿಯುವುದು ಸಹಜ. ಆಗ ದೇಹಕ್ಕೆ ಶಕ್ತಿಯ ಪೂರೈಕೆಯು ಅಗತ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ನಿಯಮಿತವಾಗಿ ಯೋಗಾಭ್ಯಾಸವನ್ನು ಮಾಡುವುದರ ಮೂಲಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು ಎಂದರು. ಪ್ರಸ್ತುತ ಉದ್ಭವಿಸಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಸನಗಳು ಮತ್ತು ಪೂರಕ ಆಹಾರ ಪದ್ದತಿಗಳು ಆವಶ್ಯವಾಗಿವೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಮಾತನಾಡಿ, ಯೋಗವು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಂದುಗೂಡಿಸುತ್ತದೆ. ಹಾಗೆಯೇ ಪ್ರಕೃತಿ ಮತ್ತು ಮಾನವನ ನಡುವೆ ಸಾಮರಸ್ಯದ ಕೊಂಡಿಯಾಗಿದ್ದು ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ರಹದಾರಿಯಾಗಿದೆ ಎಂದರು. ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಕೊಡುಗೆಯಾಗಿದ್ದು ಎಲ್ಲರೂ ಇದನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿಗಳ ನೇತೃತ್ವದಲ್ಲಿ ಸರಳ ಆಸನಗಳನ್ನು ಅಭ್ಯಸಿಸಲಾಯಿತು.
ಕಾರ್ಯಕ್ರಮ ಸಂಯೋಜಕ ಡಾ.ಮಹೇಶ್ ಪ್ರಸನ್ನ, ಕಾಲೇಜಿನ ವಿವಿಧ ವಿಭಾಗ ಮುಖ್ಯಸ್ಥರು, ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಹಿರಿಯ ಪ್ರಯೋಗಾಲಯ ಬೋಧಕ ಹರಿಪ್ರಸಾದ್.ಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.