ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ಎರಡು ನೂತನ ಉಪಕರಣಗಳ ಅಭಿವೃದ್ಧಿ…
ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಐಒಟಿ(IoT ) ಪ್ರಯೋಗಾಲಯದಲ್ಲಿ ಎರಡು ನೂತನ ಉಪಕರಣಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಲಾಕ್‍ಡೌನ್ ಸಂದರ್ಭವನ್ನು ಸಮರ್ಥವಾಗಿ ಬಳಸಿಕೊಂಡ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳು ಉಪನ್ಯಾಸಕರ ಮಾರ್ಗದರ್ಶನದೊಂದಿಗೆ ಅಟೋಮೇಟಿಕ್ ಸಾನಿಟೈಸರ್ ಡಿಸ್ಪೆನ್ಸರ್ ಹಾಗೂ ಜಿಎಸ್‍ಎಮ್ ಆಧಾರಿತ ಸ್ವಿಚ್‍ಗಳನ್ನು ನಿರ್ಮಿಸಿದ್ದಾರೆ.
ಕೋವಿಡ್-19ನ್ನು ಎದುರಿಸಲು ಕೈಗೆ ಆಗಾಗ ಸಾನಿಟೈಸರ್ ಬಳಸುವುದು ಅನಿವಾರ್ಯ. ಸಾನಿಟೈಸರ್ ಬಾಟಲಿಗಳನ್ನು ಕೈಯಿಂದ ಅಥವಾ ಕಾಲಿನಿಂದ ಬಳಸುವಾಗ ವೈರಸ್ ಹರಡುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಸ್ಪರ್ಶವಿಲ್ಲದೆ ಕೈಯನ್ನು ಮುಂದೆ ಚಾಚಿದಾಗ ಸ್ವಯಂಚಾಲಿತವಾಗಿ ಸಾನಿಟೈಸರ್ ಕೈಗೆ ಬೀಳುವಂತೆ ಕಾರ್ಯನಿರ್ವಹಿಸುವ ಯಂತ್ರವನ್ನು ನಿರ್ಮಿಸಿದ್ದಾರೆ. ಈ ಯಂತ್ರವನ್ನು ವಿದ್ಯುಚ್ಚಕ್ತಿ ಮತ್ತು ಬ್ಯಾಟರಿಯಿಂದ ಚಲಾಯಿಸಬಹುದು. ಬೇಕಾದಷ್ಟೆ ಸಾನಿಟೈಸರ್ ಬೀಳುವಂತೆ ಮಾಡುವುದರ ಮೂಲಕ ಮಿತವ್ಯಯವನ್ನೂ ಸಾಧಿಸಬಹುದು.
ದೂರದ ಜಮೀನಿನಲ್ಲಿ ಇರುವ ಪಂಪುಗಳನ್ನು ಮನೆಯಲ್ಲಿಯೇ ಕುಳಿತು ಎಸ್‍ಎಂಎಸ್ ಮೂಲಕ ಚಲಾಯಿಸಿ ನೀರಾವರಿಯನ್ನು ನಡೆಸಲು ಸಾಧ್ಯವಾಗುವ ಅಟೋಮೇಟಿಕ್ ಸ್ವಿಚ್‍ನ್ನೂ ಅಭಿವೃದ್ಧಿಪಡಿಸಲಾಗಿದೆ. ನಿರ್ದಿಷ್ಟ ಮೊಬೈಲ್ ನಂಬರಿನಿಂದ ಮೆಸೇಜ್ ಕಳುಹಿಸಿ 3 -ಫೇಸ್ ಅಥವಾ ಸಿಂಗಲ್ ಫೇಸ್ ಪಂಪುಗಳನ್ನು ನಿಯಂತ್ರಿಸಬಹುದು. ಪ್ರಸಕ್ತ ಸನ್ನಿವೇಶಕ್ಕೆ ಆವಶ್ಯಕವಾದ ಈ ಉಪಕರಣಗಳ ಆವಿಷ್ಕಾರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ತೃತೀಯ ವರ್ಷದ ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳಾದ ಮೋಹಿತ್ ಹಾಗೂ ಮಿಥುನ್.ಎಂ ವಿಭಾಗ ಮುಖ್ಯಸ್ಥ ಪ್ರೊ.ಶ್ರೀಕಾಂತ್ ರಾವ್ ಅವರ ಸಹಕಾರದೊಂದಿಗೆ ಸಹಾಯಕ ಪ್ರಾಧ್ಯಾಪಕರುಗಳಾದ ಪ್ರೊ. ವಿನಯ್.ಪಿ ಮತ್ತು ಪ್ರೊ.ಗುರುಸಂದೇಶ್ ಇವರ ಮಾರ್ಗದರ್ಶನದಲ್ಲಿ ಇದನ್ನು ನಿರ್ಮಿಸಿದ್ದಾರೆ. ಐಒಟಿ ಪ್ರಯೋಗಾಲಯ ತಂತ್ರಜ್ಞ ವೆಂಕಟೇಶ್ ಅಗತ್ಯ ನೆರವನ್ನು ನೀಡಿದ್ದಾರೆ. ಕಳೆದ ಬಾರಿ ಇದೇ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಸ್ಮಾರ್ಟ್‍ಮಿರರ್ ತಂತ್ರಜ್ಞಾನಕ್ಕೆ ರಾಜ್ಯಮಟ್ಟದ ಪ್ರಶಸ್ತಿಗಳು ಲಭಿಸಿದ್ದವು ಎಂದು ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.