ವಿವೇಕ ಜೀವವರ್ಧಕ – ಬೆಳ್ತಂಗಡಿ, ಸುಳ್ಯ ಸರ್ಕಾರಿ ಆಸ್ಪತ್ರೆಗಳಿಗೆ ಹಸ್ತಾಂತರ…
ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ತಂಡವು ಕಾಲೇಜಿನ ಸಂಚಾಲಕ ರಾಧಾಕೃಷ್ಣ ಭಕ್ತ ಅವರ ವಿಶೇಷ ಆಸ್ಥೆಯಿಂದ ನಿರ್ಮಿಸಿದ ವಿವೇಕ ಜೀವವರ್ಧಕ ಕೃತಕ ಉಸಿರಾಟದ ಸಾಧನವನ್ನು ಬೆಳ್ತಂಗಡಿ ಹಾಗೂ ಸುಳ್ಯದ ತಾಲೂಕು ಸರ್ಕಾರಿ ಆಸ್ಪತ್ರೆಗಳಿಗೆ ಹಸ್ತಾಂತರಿಸಲಾಯಿತು.
ಕಾಲೇಜಿನ ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥ ಪ್ರೊ.ಶ್ರೀಕಾಂತ್ ರಾವ್ ಸಹಾಯಕ ಪ್ರಾಧ್ಯಾಪಕ ಪ್ರೊ.ಸುದರ್ಶನ್ ಎಂ ಎಲ್ ಮತ್ತು ಐಒಟಿ ಪ್ರಯೋಗಾಲಯ ತಂತ್ರಜ್ಞ ವೆಂಕಟೇಶ್ ಅವರು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಿದ್ಯಾವತಿಯವರಿಗೆ ಹಸ್ತಾಂತರಿಸಿದರು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಅಲ್ಲಿನ ವೈದ್ಯಾಧಿಕಾರಿ ಡಾ.ಕರುಣಾಕರ ಅವರಿಗೆ ಇದನ್ನು ಹಸ್ತಾಂತರಿಸಲಾಯಿತು. ಅಮೇರಿಕಾದಲ್ಲಿ ನೆಲಸಿರುವ ಅನಿವಾಸಿ ಭಾರತೀಯ ಮಿತ್ರರು ಜತೆ ಸೇರಿ ಈ ಉಪಕರಣಕ್ಕೆ ಬೇಕಾದ ಧನಸಂಗ್ರಹಣೆಯನ್ನು ಮಾಡಿ ಈ ಕೃತಕ ಉಸಿರಾಟ ಸಾಧನವನ್ನು ಸರ್ಕಾರೀ ಆಸ್ಪತ್ರೆಗಳಿಗೆ ನೀಡುವ ಮಹತ್ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ನ್ಯೂಜೆರ್ಸಿಯ ಹೈಸ್ಕೂಲ್ ವಿದ್ಯಾರ್ಥಿಗಳಾದ ಭಕ್ತಿ ಹೆಗಡೆ, ಅನನ್ಯ ಭಟ್ ಮತ್ತು ಪ್ರಣವ ಜೋಷಿ ಇವರು ಆನ್ ಲೈನ್ ಮೂಲಕ ಲಘು ಸಂಗೀತ ಹಾಗೂ ನೃತ್ಯ ಕಾರ್ಯಕ್ರಮವನ್ನು ನಡೆಸಿ ಧನ ಸಂಗ್ರಹಕ್ಕೆ ಚಾಲನೆ ನೀಡಿದ್ದರು ಎಂದು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ತಿಳಿಸಿದ್ದಾರೆ.