ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಅಂತಾರಾಷ್ಟ್ರೀಯ ಯೋಗ ದಿನಾಚರಣೆ…

ಪುತ್ತೂರು: ಯೋಗವನ್ನು ಪ್ರತಿಯೊಬ್ಬರೂ ಕೂಡಾ ತನ್ನ ದೈನಂದಿನ ದಿನಚರಿಯ ಭಾಗವನ್ನಾಗಿ ಅಳವಡಿಸಿಕೊಳ್ಳುವುದರಿಂದ ಒತ್ತಡ ನಿವಾರಣೆ, ಮಾನಸಿಕ ಸ್ಥಿತಿಯ ಸುಧಾರಣೆ, ದೈಹಿಕ ಸದೃಢತೆಯನ್ನು ಸಾಧಿಸಬಹುದು ಎಂದು ವಿದ್ಯಾಭಾರತಿಯ ದಕ್ಷಿಣ ಕನ್ನಡದ ಯೋಗ ಸಂಯೋಜಕ ಶ್ರೀ ಚಂದ್ರಶೇಖರ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಎಂಬಿಎ ವಿಭಾಗದ ಆಶ್ರಯದಲ್ಲಿ ಕಾಲೇಜಿನ ವಿಶ್ವೇಶ್ವರಯ್ಯ ಸಭಾ ಭವನದಲ್ಲಿ ನಡೆದ 9ನೇ ಅಂತಾರಾಷ್ಟ್ರೀಯ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಯೋಗ ಇಂದು ವಿಶ್ವವ್ಯಾಪಿಯಾಗಿದೆ, ವಿದೇಶಗಳೂ ಅದರ ಮಹತ್ವವನ್ನು ಅರಿತಿವೆ. ಯಾವುದೇ ವ್ಯತಿರಿಕ್ತ ಪರಿಣಾಮಗಳಿಲ್ಲದ ಯೋಗವನ್ನು ಎಲ್ಲರೂ ಅಭ್ಯಸಿಸಿ ಆರೋಗ್ಯವಂತರಾಗಬೇಕೆಂದು ಹೇಳಿದರು. ಇಂದಿನ ವೇಗದ ಯುಗದಲ್ಲಿ ಯೋಗದ ಮಹತ್ವದ ಬಗ್ಗೆ ಅವರು ಬೆಳಕು ಚೆಲ್ಲಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಬಿಎ ವಿಭಾಗದ ಡಾ.ರೋಬಿನ್ ಮನೋಹರ್ ಶಿಂಧೆ ಮಾತನಾಡಿ ಯಾಂತ್ರಿಕ ಜಗತ್ತಿನಲ್ಲಿ ನಿರಂತರ ಕೆಲಸ ಮತ್ತು ಒತ್ತಡದಿಂದ ಪ್ರತಿಯೊಬ್ಬರೂ ದಣಿಯುವುದು ಸಹಜ. ಉತ್ತಮ ಆರೋಗ್ಯ ಹಾಗೂ ಏಕಾಗ್ರತೆಯನ್ನು ಸಾಧಿಸಲು ನಿಯಮಿತವಾಗಿ ಯೋಗಾಭ್ಯಾಸವನ್ನು ಮಾಡುವುದು ಅವಶ್ಯಕ ಎಂದರು. ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಯೋಜನಗಳನ್ನು ಪಡೆದುಕೊಳ್ಳಲು ಮತ್ತು ಅನುಭವಿಸಲು ಇದು ಪ್ರಯೋಜನಕಾರಿ ಎಂದು ನುಡಿದರು
ಸಭಾ ಕಾರ್ಯಕ್ರಮದ ನಂತರ ಮುಖ್ಯ ಅತಿಥಿಗಳ ನೇತೃತ್ವದಲ್ಲಿ ಸರಳ ಆಸನಗಳನ್ನು ಅಭ್ಯಸಿಸಲಾಯಿತು.
ಎಂಬಿಎ ವಿಭಾಗದ ಉಪನ್ಯಾಸಕಿ ಪ್ರೊ. ರೇಶ್ಮಾ ಪೈ ಸ್ವಾಗತಿಸಿ ವಂದನಾರ್ಪಣೆಗೈದರು. ಕು.ಶ್ರದ್ಧಾ ಕಾರ್ಯಕ್ರಮ ನಿರ್ವಹಿಸಿದರು.


