ಮಾಜಿ ಮೇಯರ್ ಕೆ.ಕೆ.ಮೆಂಡನ್ ನಿಧನ…
ಮಂಗಳೂರು:ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ.ಕೃಷ್ಣಪ್ಪ ಮೆಂಡನ್ (89) ಶುಕ್ರವಾರ ಮುಂಜಾನೆ ಅಳಪೆ ಸ್ವಗೃಹದಲ್ಲಿ ನಿಧನ ಹೊಂದಿದರು.
ಅವರು ನಗರ ಪಾಲಿಕೆ ಕಂಕನಾಡಿ ,ಅಳಪೆ ವಾರ್ಡ್ನಿಂದ ನಾಲ್ಕು ಬಾರಿ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಸಜ್ಜನ ರಾಜಕಾರಣಿಯೆಂದೇ ಗುರುತಿಸಲ್ಪಟ್ಟಿದ್ದ ಅವರು ಅತ್ತಾವರ ಶ್ರೀವಿಷ್ಣುಮೂರ್ತಿ ಉಮಾಮಹೇಶ್ವರ ದೇವಸ್ಥಾನದ ಮೊಕ್ತೇಸರರಾಗಿದ್ದರು. ಅಳಪೆ ಕರ್ಮಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ, ಕರಾವಳಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಕಂಕನಾಡಿ ಯುವಕ ವೃಂದದ ಸ್ಥಾಪಕ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ದ.ಕ.ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷರಾಗಿ ಸಾಮಾಜಿಕ ಮುಖಂಡರಾಗಿದ್ದರು.
ಅವರು ಪತ್ನಿ.ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.ಮಾಜಿ ಮೇಯರ್ ಗಳಾದ ಶಶಿಧರ ಹೆಗ್ಡೆ,ಹಿಲ್ಡಾ ಆಳ್ವ ,ಮಾಜಿ ಶಾಸಕ ಮೊಯಿದೀನ್ ಬಾವ ಸೇರಿದಂತೆ ಹಲವರು ಅಳಪೆ ಮನೆಗೆ ತೆರಳಿ ಅಂತಿಮ ದರ್ಶನ ಪಡೆದರು.
ಕೇಂದ್ರ ಮಾಜಿ ಸಚಿವರಾದ ಜನಾರ್ದನ ಪೂಜಾರಿ, ಎಂ.ವೀರಪ್ಪ ಮೊಯಿಲಿ,ಮಾಜಿ ಸಚಿವ ರಮಾನಾಥ ರೈ ,ಮಾಜಿ ಶಾಸಕರಾದ ಜೆ.ಆರ್.ಲೋಬೋ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಕೆ.ಕೆ.ಮೆಂಡನ್ ನಿಧಾನಕ್ಕೆ ಸಂತಾಪ ವ್ಯಕ್ತ ಪಡಿಸಿದ್ದಾರೆ.