ಆಳ್ವಾಸ್‍ನಲ್ಲಿ ಗಣರಾಜ್ಯೋತ್ಸವ….

ಮೂಡುಬಿದಿರೆ: ದೇಶದಲ್ಲಿ ನೂರ ಮೂವತ್ತು ಕೋಟಿ ಜನಸಂಖ್ಯೆ ಇದ್ದರೂ ಅಬ್ದುಲ್ ಕಲಾಂ ಕಂಡ 2020ಯ ಕನಸನ್ನು ಪೂರ್ಣವಾಗಿ ಸಾಕಾರಗೊಳಿಸಲು ವಿಫಲರಾಗಿದ್ದೇವೆ. ಸಾಧಿಸಬೇಕಾದ ವಿಷಯಗಳು ಇನ್ನು ತುಂಬಾ ಇವೆ. ಭಾರತದಲ್ಲಿ ಪ್ರತಿದಿನವು ಹೊಸ ಹೊಸ ಸಮಸ್ಯೆಗಳು ಎದುರಾಗುತ್ತಿವೆ. ದೇಶದಲ್ಲಿ 40 ಕೋಟಿಯಷ್ಟು ಜನರು ತಿನ್ನಲು ಅನ್ನ ಸಿಗದೆ ನರಳುತ್ತಿದ್ದಾರೆ. ನಮ್ಮ ರಕ್ಷಣೆಯಿಂದ ಹಿಡಿದು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವವರೆಗೆ ಪ್ರತೀ ವ್ಯವಸ್ಥೆಯನ್ನು ದೇಶ ಮಾಡಿಕೊಟ್ಟಿದೆ ಹೀಗಿರುವಾಗ ದೇಶ ಚೆನ್ನಾಗಿರಲು ನಾವೇನು ಕೊಡುಗೆ ನೀಡಿದ್ದೇವೆ ಎಂಬುದನ್ನು ಚಿಂತಿಸುವ ಅನಿವಾರ್ಯತೆ ಇದೆ ಎಂದು ಮಾಜಿ ಐಪಿಎಸ್ ಆಫೀಸರ್ ಅಣ್ಣಾಮಲೈ ಹೇಳಿದರು.
ಪುತ್ತಿಗೆಯ ವನಜಾಕ್ಷಿ ಕೆ ಶ್ರೀಪತಿ ಭಟ್ ಬಯಲು ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆದ 71ನೇ ಗಣರಾಜ್ಯೋತ್ಸವದ ದ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ‘ಗಣರಾಜ್ಯೋತ್ಸವ ಆಚರಿಸುವುದು ನಮ್ಮ ಕರ್ತವ್ಯಗಳನ್ನು ತಿಳಿಯಲು. ದೊಡ್ಡ ಮಟ್ಟಿನ ದೇಶ ಸೇವೆ ಸಾಧ್ಯವಾಗದಿದ್ದರೂ ನಮ್ಮ ಊರಿನಲ್ಲಿ ಪರಿಸರಕ್ಕಾಗಿ ಅಥವಾ ಜನರಿಗಾಗಿ ಮಾಡುವ ಸೇವೆಗಳು ದೇಶಕ್ಕಾಗಿ ಮಾಡುವ ಕರ್ತವ್ಯಗಳು. ನಮ್ಮ ಜೀವನದಲ್ಲಿ ದೇಶ ಮೊದಲ ಪ್ರಾಧಾನ್ಯತೆಯಾಗಬೇಕು’ ಎಂದರು. ಆಳ್ವಾಸ್ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿಸಿಲ್ಲ. ಶಿಕ್ಷಣದ ಜೊತೆಗೆ ಉತ್ತಮ ನಡತೆ, ಮೌಲ್ಯ ಹಾಗೂ ದೇಶ ಕಟ್ಟುವ ಕಾರ್ಯವನ್ನೂ ಮಾಡುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವನ್ನು ಶ್ಲಾಘಿಸಿದರು.
ಅತಿಥಿಗಳನ್ನು ಕೆಡೆಟ್ ಕ್ಯಾಪ್ಟನ್ ಚಂದನ ಎಸ್, ಪಿಟಿ ಆಫೀಸರ್ ಗಳಾದ ಕೀರ್ತನ ಶೆಟ್ಟಿ, ಶರಣ್ಯ ಎಂ.ಎನ್, ಸೇಜಲ್ ಅವರು ವೇದಿಕೆಗೆ ಕರೆತಂದರು. ಪರೇಡ್ ಕಮಾಂಡರ್ ಸೀನಿಯರ್ ಅಂಡರ್ ಆಫೀಸರ್ ಮುತ್ತಮ್ಮ ವರದಿ ನೀಡಿದರು. ಗಾರ್ಡ್ ಕಮಾಂಡರ್ ಜ್ಯೂನಿಯರ್ ಅಂಡರ್ ಆಫೀಸರ್ ಮನೋಜ್ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ವಂದೇ ಮಾತರಂ ಗೀತೆಯ ಬಳಿಕ ಧ್ವಜಾರೋಹಣ ಮಾಡಲಾಯಿತು. ರಾಷ್ಟ್ರಗೀತೆ ಹಾಡುವುದರ ಮೂಲಕ ದೇಶಕ್ಕೆ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್‍ಸಿಸಿ ಗ್ರೂಪ್ ಕಮಾಂಡರ್ ಕರ್ನಲ್ ಎ.ಕೆ.ಶರ್ಮ ವಹಿಸಿದ್ದರು. ವಿಶೇಷ ಆಹ್ವಾನಿತರಾದ ಕರ್ನಲ್ ಮನೋಜ್ ವಿ ಯು, ಗ್ರೂಪ್ ಕ್ಯಾಪ್ಟನ್ ಆರ್ ಶ್ರೀನಿವಾಸನ್, ಕಮಾಂಡರ್ ವಿಫುಲ್ ಗುಪ್ತ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿಗಳಾದ ವಿವೇಕ್ ಆಳ್ವ ಮತ್ತು ಡಾ. ವಿನಯ್ ಆಳ್ವ ಉಪಸ್ಥಿತರಿದ್ದರು.