ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ಗಣರಾಜ್ಯೋತ್ಸವ ದಿನಾಚರಣೆ…
ಪುತ್ತೂರು: ನಮ್ಮ ದೇಶಕ್ಕೆ ಭಾವೈಕ್ಯತೆಯೇ ಜೀವಾಳ. ಸಮೃದ್ಧ ಸಂಸ್ಕೃತಿಯ ಇತಿಹಾಸ ಹಾಗೂ ವೀರ ಧೀರರ ಪರಂಪರೆಯ ಹಿನ್ನೆಯುಳ್ಳ ದೇಶದ ಅಭಿವೃದ್ಧಿಯು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ ಡಿ ಕಲ್ಲಾಜೆ ಹೇಳಿದರು.
ಅವರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ 72ನೇ ಗಣರಾಜ್ಯೋತ್ಸವ ದಿನ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ ಮಾತಾಡಿದರು. ಪ್ರತಿಯೊಬ್ಬನೂ ಈ ದೇಶದ ಪ್ರಜೆಯಾಗಿರುವುದಕ್ಕೆ ಹೆಮ್ಮೆ ಪಡಬೇಕು. ನಾವಿಂದು ಸ್ವತಂತ್ರವಾಗಿ ಶಿಸ್ತಿನ ಜೀವನವನ್ನು ನಡೆಸುವುದಕ್ಕೆ ಕಾರಣ ನಮ್ಮ ಸಂವಿಧಾನ ಎಂದರು. ದೇಶದ ಸ್ವಾತಂತ್ರ್ಯಕ್ಕೆ ಮತ್ತು ಸಂವಿಧಾನಕ್ಕೆ ಶ್ರಮಿಸಿದ ಮಹಾನ್ ಚೇತನಗಳಿಗೆ ಗೌರವವನ್ನು ಸಲ್ಲಿಸೋಣ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಮಹೇಶ್‍ಪ್ರಸನ್ನ ಕೆ. ಮಾತನಾಡಿ ದೇಶದ ಸಂವಿಧಾನದಿಂದ ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಹಕ್ಕುಗಳು ದೊರೆತಿದೆ. ಹಾಗೆಯೇ ನಾವು ನಿರ್ವಹಿಸಬೇಕಾದ ಕರ್ತವ್ಯಗಳೂ ಇವೆ. ದೇಶದ ಸಂಪನ್ಮೂಲಗಳನ್ನು ಕಾಪಾಡುವುದು, ರಾಷ್ಟ್ರ ಧ್ವಜ, ರಾಷ್ಟ್ರ ಗೀತೆಯನ್ನು ಗೌರವಿಸುವುದು, ಸರ್ಕಾರದ ನಿಯಮಗಳನ್ನು ಪಾಲಿಸುವುದು ಅತೀ ಅಗತ್ಯ ಎಂದರು. ನಾವೆಲ್ಲರೂ ನಮ್ಮ ಜವಾಬ್ಧಾರಿಗಳನ್ನು ಅರಿತುಕೊಂಡು ಸಂಘಟಿತರಾಗಿ ಪ್ರಯತ್ನಿಸಿದರೆ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗುವುದರ ಜತೆಯಲ್ಲಿ ಭಾರತವು ವಿಶ್ವಗುರುವಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೂಲವಿಜ್ಞಾನ ವಿಭಾಗದ ಡಾ| ಪ್ರಸಾದ್ ಎನ್ ಬಾಪತ್ ಸ್ವಾಗತಿಸಿ ವಂದಿಸಿದರು.