ಸಾಹಿತ್ಯ ಸ್ವರಚನೆ ಕಮ್ಮಟ…
ಬಂಟ್ವಾಳ:ಮಕ್ಕಳಲ್ಲಿ ಸಾಹಿತ್ಯ ಸದಭಿರುಚಿಯ ವಿಕಾಸ ಅಗತ್ಯ. ಇದಕ್ಕಾಗಿ ಬಂಟ್ವಾಳ ತಾಲೂಕಿನ ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಶ್ರಮಿಸುತ್ತಿದೆ. ಮಕ್ಕಳ ಕಲಾ ಲೋಕದಿಂದ ತಾಲೂಕಿನ ಭಾವೀ ಜನಾಂಗಕ್ಕೆ ಪ್ರಯೋಜನವಾಗುತ್ತಿದೆ. ವಿದ್ಯಾರ್ಥಿಗಳು ಸ್ವಸಾಹಿತ್ಯ ರಚನೆ ಮತ್ತು ಸಾಹಿತ್ಯ ವಾಚನದ ಮೂಲಕ ರಸಾಸ್ವಾದನೆ ಮಾಡಲು ಸಮಯವನ್ನು ಮೀಸಲಿಡಬೇಕು. ಮಕ್ಕಳ ಕಲಾಲೋಕದದ ಕಾರ್ಯಕ್ರಮಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದು ಕಡೇಶ್ವಾಲ್ಯ ಜಿ.ಪಂ. ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕಿ ಕುಮಾರಿ ಸಾನ್ವಿ ಹೇಳಿದರು.
ಅವರು ಕಡೇಶ್ವಾಲ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಣಿ, ಕೆದಿಲ ಮತ್ತು ಕಲ್ಲಡ್ಕ ಕಡೇಶ್ವಾಲ್ಯ ಕ್ಲಸ್ಟರ್ಗಳ ಶಾಲಾ ಸಾಹಿತ್ಯಾಸಕ್ತ ಶಿಕ್ಷಕರಿಗೆ ಮಕ್ಕಳ ಕಲಾ ಲೋಕ ಸಂಘಟಿಸಿದ ಒಂದು ದಿನದ ಸಾಹಿತ್ಯ ಸ್ವರಚನೆ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಭಾಸ್ಕರ ಅಢ್ವಳ ಮತ್ತು ರಮೇಶ ಎಂ. ಬಾಯಾರು ಸಾಹಿತ್ಯ ಸ್ವರಚನೆ, ಸಾಹಿತ್ಯ ಸಂಘದ ರಚನೆ, ಶಾಲಾ ಭಿತ್ತಿ ಪತ್ರಿಕೆ ಮತ್ತು ಶಾಲಾ ವಾರ್ಷಿಕ ಹಸ್ತ ಪತ್ರಿಕೆ ತಯಾರಿಗಳ ಬಗ್ಗೆ ಮಾಹಿತಿ ನೀಡಿದರು. ಕಮ್ಮಟದಲ್ಲಿ ಶಿಕ್ಷಕರು ರಚಿಸಿದ ಹಸ್ತ ಪತ್ರಿಕೆಯನ್ನು ಮುಖ್ಯ ಶಿಕ್ಷಕ ಬಾಬು ಪೂಜಾರಿ ಬಿಡುಗಡೆಗೊಳಿಸಿದರು.
ಕಮ್ಮಟದ ಪ್ರಾಯೋಜಕರಾದ ಕಡೇಶ್ವಾಲ್ಯ ಜಿ.ಪಂ. ಹಿರಿಯ ಪ್ರಾಥಮಿಕ ಶಾಲಾ ಸಹ ಶಿಕ್ಷಕ ಪೀರಾಜಿ ವಾಬಳೆ ಸಹಕರಿಸಿದರು. ಮಕ್ಕಳ ಕಲಾಲೋಕದ ಕಾರ್ಯದರ್ಶಿ ಪುಷ್ಪಾ ಎಚ್ ನಿರೂಪಿಸಿದರು. ಉಪಾಧ್ಯಕ್ಷ ಶಿವರಾಮ ಭಟ್ ನೆಡ್ಲೆ ವಂದಿಸಿದರು.