ಶ್ರದ್ಧೆ, ಭಕ್ತಿಯಿಂದ ಮಾಡುವ ಸತ್ಕಾರ್ಯಗಳನ್ನು ಸೃಷ್ಠಿಕರ್ತನು ಸ್ವೀಕರಿಸುತ್ತಾನೆ-ಪೂಕೋಯ ತಂಙಳ್
ಪುತ್ತೂರು: ಯಾವುದೇ ಸತ್ಕರ್ಮಗಳನ್ನು ಮಾಡುವಾಗಲೂ ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಿದರೆ ಮಾತ್ರ ಅದನ್ನು ಸೃಷ್ಠಿಕರ್ತನು ಸ್ವೀಕರಿಸುತ್ತಾನೆ, ನಮ್ಮ ಪೂರ್ವಕರು ಧರ್ಮ ಎಲ್ಲಾ ಕಟ್ಟುಪಾಡುಗಳನ್ನು ಶ್ರದ್ಧೆಯಿಂದ ನೆರವೇರಿಸುತ್ತಿದ್ದರು, ಅದನ್ನೇ ನಾವು ಮುಂದುವರಿಸಿಕೊಂಡು ಹೋಗಬೇಕು ಎಂದು ಪುತ್ತೂರು ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಹೇಳಿದರು.
ಅವರು ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ರೆಂಜಲಾಡಿ ಬದ್ರಿಯಾ ಜುಮಾ ಮಸೀದಿ ಅಧೀನದಲ್ಲಿರುವ ಖಿದ್ಮತುದ್ದೀನ್ ಯಂಗ್‍ಮೆನ್ಸ್ ಎಸೋಸಿಯೇಶನ್ ರೆಂಜಲಾಡಿ ಇದರ ಆಶ್ರಯದಲ್ಲಿ ಮಜ್ಲಿಸುನ್ನೂರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವರ್ಷಗಳು ಉರುಳುತ್ತಿದ್ದು ನಮ್ಮ ಆಯುಷ್ಯ ಕ್ಷೀಣಿಸುತ್ತಿದೆ, ಮೊಬೈಲ್‍ನಲ್ಲೇ ತಲ್ಲೀನರಾಗಿ ಸಮಯ ಹಾಳು ಮಾಡದೆ ಯುವಜನತೆ ಸಜ್ಜನಿಕತೆಯಲ್ಲಿ ತೊಡಗಿಸಿಕೊಳ್ಳಬೇಕು. ಇನ್ನೊಬ್ಬರನ್ನು ನೋಯಿಸುವ, ನಮ್ಮೊಳಗೆ ಭಿನ್ನತೆ ಸೃಷ್ಟಿಯಾಗುವ ವಿಚಾರಗಳಿಂದ ಪ್ರತಿಯೊಬ್ಬರೂ ದೂರ ಉಳಿಯಬೇಕು, ಸತ್ಕಾರ್ಯಗಳಿಂದ ನಮ್ಮ ಹೃದಯ ಪ್ರಕಾಶಿಸುತ್ತಿರಬೇಕು ಎಂದು ಹೇಳಿದರು.
ರೆಂಜಲಾಡಿ ಮಸೀದಿಯ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ಮಜ್ಲಿಸುನ್ನೂರ್ ಇತರ ಧಾರ್ಮಿಕ ಕಾರ್ಯಕ್ರಮಗಳಂತೆ ಅಲ್ಲ, ಇದರಲ್ಲಿ ಜನರು ಸ್ವಯಂಪ್ರೇರಿತರಾಗಿ ಭಾಗವಹಿಸಬೇಕೇ ವಿನಃ ಕಡ್ಡಾಯ ಮಾಡುವುದಕ್ಕೆ ಅವಕಾಶವಿಲ್ಲ. ಧ್ವೇಷ, ಅಸೂಯೆ, ಅಹಂಕಾರಗಳನ್ನು ದೂರವಾಗಿಸಲು ಮತ್ತು ಸ್ನೇಹ, ಸಂಬಂಧಗಳನ್ನು ಗಟ್ಟಿಗೊಳಿಸಲು ಮಜ್ಲಿಸುನ್ನೂರ್ ಕಾರ್ಯಕ್ರಮ ವೇದಿಕೆಯಾಗಲಿದೆ. ಇದರಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಿದರೆ ಫಲ ಖಂಡಿತವಾಗಿಯೂ ಲಭಿಸುತ್ತದೆ ಎಂದು ಹೇಳಿದರು.
ರೆಂಜಲಾಡಿ ಮಸೀದಿ ಖತೀಬ್ ರಫೀಕ್ ಫೈಝಿ ಮಾಡನ್ನೂರು ನೇತೃತ್ವದಲ್ಲಿ ಮೌಲೀದ್ ಪಾರಾಯಣ ನಡೆಯಿತು. ಸದರ್ ಉಸ್ತಾದ್ ಅಬೂಬಕ್ಕರ್ ಮುಸ್ಲಿಯಾರ್, ರೆಂಜಲಾಡಿ ಮಸೀದಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಹನೀಫ್ ರೆಂಜಲಾಡಿ, ಉಪಾಧ್ಯಕ್ಷ ಝೈನುದ್ದೀನ್ ಜೆ.ಎಸ್, ಕೂಡುರಸ್ತೆ ಮಸೀದಿ ಖತೀಬ್ ಯಾಕೂಬ್ ದಾರಿಮಿ, ಕೂಡುರಸ್ತೆ ಮಸೀದಿ ಅಧ್ಯಕ್ಷ ಪಿ.ಕೆ ಮುಹಮ್ಮದ್ ಕೂಡುರಸ್ತೆ, ಇಬ್ರಾಹಿಂ ಸಖಾಫಿ ಕಲ್ಪಣೆ, ಬಂಗೇರುಕಟ್ಟೆ ಖತೀಬ್ ರಝಾಕ್ ದಾರಿಮಿ ಕೂಡುರಸ್ತೆ, ಶಾಹುಲ್ ಹಮೀದ್ ಫೈಝಿ, ಆದರ್ಶ ಸೇವಾ ಸಂಘದ ಅಧ್ಯಕ್ಷ ರಫೀಕ್ ರೆಂಜಲಾಡಿ, ಕಾರ್ಯದರ್ಶಿ ರಹೀಂ ರೆಂಜಲಾಡಿ, ಯಂಗ್‍ಮೆನ್ಸ್ ಗಲ್ಫ್ ಕಮಿಟಿ ಮುಖಂಡ, ಉದ್ಯಮಿ ನಾಸಿರ್ ರೆಂಜಲಾಡಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ಯಂಗ್‍ಮೆನ್ಸ್ ಅಧ್ಯಕ್ಷ ಝೈನುಲ್ ಆಬಿದ್ ರೆಂಜಲಾಡಿ, ಪ್ರ.ಕಾರ್ಯದರ್ಶಿ ಬಾತಿಷಾ ಪಿ, ಉಪಾಧ್ಯಕ್ಷ ರಫೀಕ್ ಪರಾಡ್, ಕೋಶಾಧಿಕಾರಿ ಇಮ್ರಾನ್ ರೆಂಜಲಾಡಿ, ಜತೆ ಕಾರ್ಯದರ್ಶಿ ಜಾಬಿರ್ ಸುಲ್ತಾನ್ ಹಾಗೂ ಯಂಗ್‍ಮೆನ್ಸ್ ಸದಸ್ಯರು ಸಹಕರಿಸಿದರು.