ಪುತ್ತೂರು – ಹಿಂದೂ ಐಕ್ಯತಾ ಸಮಾವೇಶ….
ಪುತ್ತೂರು: ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ನಡೆಯುವ ಹಿಂದೂ ಐಕ್ಯತಾ ಸಮಾವೇಶ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಮಾ. 21 ರಂದು ನಡೆಯಿತು.
ಮುಖ್ಯ ಅತಿಥಿಯಾಗಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ಮಾತನಾಡಿ ನಮ್ಮೆಲ್ಲರ ಶತಮಾನದ ಕಸನಾಗಿದ್ದ ಅಯೋಧ್ಯಾ ಶ್ರೀರಾಮ ಮಂದಿರ ನಿರ್ಮಾಣ ನನಸಾಗುತ್ತಿದೆ. ಆದರೆ ರಾಮ ರಾಜ್ಯದ ಕನಸು ಬಾಕಿಯಿದೆ. ಅಲ್ಲಿಯ ತನಕ ಮಂದಿರ ಕನಸು ಪೂರ್ಣವಾಗುವುದಿಲ್ಲ. ನಿರ್ಮಾಣಗೊಂಡ ರಾಮ ಮಂದಿರ ಶತಮಾನದ ಸೂರ್ಯ ಚಂದ್ರಾದಿಗಳ ಕಾಲ ತನಕ ಮಂದಿರವಾಗಿಯೇ ಉಳಿಯ ಬೇಕು. ಅದಕ್ಕಾಗಿ ಪ್ರತಿಯೊಬ್ಬರು ರಾಮರಾಗಬೇಕಾಗಿದೆ. ರಾಮ ಎಂಬುದು ಸದ್ಗುಣದ ರಾಶಿ, ಸಂಸ್ಕೃತಿಯ ಪ್ರತೀಕ. ಆ ರಾಮನ ಆದರ್ಶವನ್ನು ಮುಂದಿನ ಸಂತತಿಯಲ್ಲಿ ಬಿತ್ತಿ ಬೆಳೆಸದಿದ್ದಲ್ಲಿ ಮಂದಿರ ನಿರ್ಮಾಣಕ್ಕೆ ಅರ್ಥವಿಲ್ಲ ಎಂದರು.
ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಒಡಿಯೂರಿನ ಶ್ರೀ ಗುರು ದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮಿಜಿ, ಕರಿಂಜೆ ವೀರಾಂಜನೇಯ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ ಮತ್ತು ಕಣಿಯೂರು ಮಠದ ಮಹಾಬಲ ಸ್ವಾಮೀಜಿ ಆಶೀರ್ವಚನದ ನುಡಿಗಳನ್ನಾಡಿದರು.
ಕುಂಟಾರು ರವೀಶ ತಂತ್ರಿಗಳು ಅಧ್ಯಕ್ಷತೆ ವಹಿಸಿದ್ದರು. ಹಿಂಜಾವೇ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ನಿರಾಣಿ, ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಬೆಂಗಳೂರಿನ ಭರತ್ ಸೌಂದರ್ಯ, ಗೌರವ ಅಧ್ಯಕ್ಷ ಡಾ. ಎಂ.ಕೆ. ಪ್ರಸಾದ್, ಎಸ್‍ಸಿಡಿಸಿಸಿ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಹಿಂಜಾವೇ ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೊಸಮನೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 19 ಮಂದಿ ಅಯೋಧ್ಯಾ ಕರಸೇವಕರನ್ನು ಗೌರವಿಸಲಾಯಿತು ಹಾಗೂ ಸಾರ್ವಜನಿಕರ ಸೇವೆಗಾಗಿ ಹಿಂಜಾವೇ ಕೊಡುಗೆಯಾಗಿ ನೀಡಿದ ಆಂಬ್ಯುಲೆನ್ಸ್ ಸೇವೆಯನ್ನು ಸ್ವಾಮೀಜಿ ಲೋಕಾರ್ಪಣೆ ಮಾಡಲಾಯಿತು.
ಸಂಜೆ ದರ್ಬೆ ವೃತ್ತದಿಂದ ಶ್ರೀ ಮಹಾಲಿಂಗೇಶ್ವರ ದೇವಳದ ತನಕ ಮುಖ್ಯರಸ್ತೆಯಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಗೆ ಹಿಂದೂ ಜಾಗರಣಾ ವೇದಿಕೆಯ ಗೌರವ ಅಧ್ಯಕ್ಷ ಡಾ. ಎಂ.ಕೆ. ಪ್ರಸಾದ್ ಚಾಲನೆ ನೀಡಿದರು.