ಗಣೇಶ ಬೀಡಿಯ ಆಡಳಿತ ನಿರ್ದೇಶಕ ಡಾ. ಜಗನ್ನಾಥ ಶೆಣೈ ಬಿ.ಸಿ.ರೋಡಿನ ಕನ್ನಡ ಭವನಕ್ಕೆ ಭೇಟಿ…
ಬಂಟ್ವಾಳ: ಬೆಂಗಳೂರಿನ ರಾಷ್ಟ್ರೋತ್ತಾನ ಪರಿಷತ್ ವತಿಯಿಂದ ಬಿಡುಗಡೆ ಮಾಡಲಾದ ‘ಭಾರತ ಭಾರತಿ’ ಪುಸ್ತಕವು ಸಾಹಿತ್ಯ ಲೋಕಕ್ಕೆ ನೀಡಿದ ವಿಶೇಷ ಕೊಡುಗೆ ಆಗಿದೆ ಎಂದು ಮಂಗಳೂರು ಗಣೇಶ ಬೀಡಿಯ ಆಡಳಿತ ನಿರ್ದೇಶಕರಾದ ಡಾ. ಜಗನ್ನಾಥ ಶೆಣೈ ಬಿ.ಸಿ.ರೋಡಿನ ಕನ್ನಡ ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದರು.
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅವರನ್ನು ಕ.ಸಾ.ಪ ಅಧ್ಯಕ್ಷ ಕೆ.ಮೋಹನ್ ರಾವ್ ಸ್ವಾಗತಿಸಿದರು. ಬಳಿಕ ಸಮಾರಂಭಲ್ಲಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶೆಣೈಯವರು ನೂತನ ಕನ್ನಡ ಭವನದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ನಿರಂತರ ಸಾಹಿತ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುವುದಕ್ಕೆ ತಮ್ಮ ಪ್ರೋತ್ಸಾಹವಿರುವುದಾಗಿ ತಿಳಿಸಿದರು.
ಕೊಂಕಣಿ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅವರು ಮಾತನಾಡಿ ಮಂಗಳೂರು ಗಣೇಶ ಬೀಡಿ ಸಂಸ್ಥೆಯು ಕಳೆದ ಶತಮಾನದಲ್ಲಿ ಸಹಸ್ರಾರು ಮಂದಿಗೆ ಉದ್ಯೋಗ ನೀಡಿ ಕುಟುಂಬ ನಿರ್ವಹಣೆಗೆ ಅವಕಾಶ ಮಾಡಿ ಕೊಟ್ಟಿದೆ. 1974 ರಲ್ಲಿ ನೇತ್ರಾವತಿ ನದಿಯಲ್ಲಿ ಬಂದ ಮಹಾ ನೆರೆಯ ಸಂದರ್ಭದಲ್ಲಿ ಸಂತ್ರಸ್ತರಿಗೆ ಉದಾರ ದೇಣಿಗೆ ನೀಡಿರುವುದನ್ನು ನೆನಪಿಸಿಕೊಂಡರು. ಪಾಣೆಮಂಗಳೂರು ಶಾರದಾ ಪ್ರೌಢ ಶಾಲಾ ಸಂಚಾಲಕ ಜನಾರ್ಧನ ಭಟ್ ಮಾತನಾಡಿ ಜಗನ್ನಾಥ ಶೆಣೈಯವರು ಬಂಟ್ವಾಳದವರಾಗಿದ್ದು ವೆಂಕಟ್ರಮಣ ದೇವಸ್ಥಾನ, ಎಸ್.ವಿ.ಎಸ್. ಕಾಲೇಜು ಸೇರಿದಂತೆ ಹಲವು ಸಂಸ್ಥೆಗಳಿಗೆ ಕೊಡುಗೈ ದಾನಿಯಾಗಿದ್ದಾರೆ ಎಂದು ಸ್ಮರಿಸಿಕೊಂಡರು. ಬಂಟ್ವಾಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳಾನಧ್ಯಕ್ಷ ಡಾ. ಸುರೇಶ ನೆಗಳಗುಳಿ ಮಾತನಾಡಿ ಕನ್ನಡ ಭವನದಲ್ಲಿ ಸುಸಜ್ಜಿತವಾದ ಗ್ರಂಥಾಲಯವನ್ನು ತೆರೆಯುವಂತೆ ಸಲಹೆ ನೀಡಿದರು.
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮೋಹನ್ ರಾವ್ ಸ್ವಾಗತಿಸಿ ಪರಿಚಯಿಸಿದರು. ಪ್ರಮುಖರಾದ ಎ.ಸಿ.ಭಂಡಾರಿ, ಜಗನ್ನಾಥ ಚೌಟ ಮಾಣಿ, ಐತಪ್ಪ ಆಳ್ವ, ಕೊಳಕೆ ಗಂಗಾಧರ ಭಟ್ , ಬಿ.ಎಮ್. ಅಬ್ಬಾಸ್ ಅಲಿ, ಜಯಾನಂದ ಪೆರಾಜೆ, ಪಲ್ಲವಿ ಕಾರಂತ್ ಮೊದಲಾದವರು ಉಪಸ್ಥಿತರಿದ್ದರು.
ಗೌರವ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ ವಂದಿಸಿದರು ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ನಿರೂಪಿಸಿದರು.