ಮಾಣಿ ಗ್ರಾಮ ಪಂಚಾಯತ್ ನ ನೂತನ ಸದಸ್ಯರಿಗೆ ತರಬೇತಿ ಕಾರ್ಯಕ್ರಮ…
ಮಾಣಿ: ಕಲಿಕೆ ನಿಂತ ನೀರಾಗಬಾರದು, ಅದು ಹರಿಯುತ್ತಿರುವ ನೀರಾಗಬೇಕು. ನಾವು ಎಷ್ಟೇ ಕಲಿತರೂ ಇನ್ನಷ್ಟು ಕಲಿಯಲು ಬಾಕಿ ಇರುತ್ತದೆ. ಆದುದರಿಂದ ತರಬೇತಿಗೆ ಬಹಳ ಪ್ರಾಮುಖ್ಯತೆ ಇದೆ. ತರಬೇತಿಯಲ್ಲಿ ನಾವೆಲ್ಲರೂ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಹೇಳಿದರು.
ಅವರು ಪಂಚಾಯತ್ ಸಭಾಂಗಣದಲ್ಲಿ ಪಡಿ ಸಂಸ್ಥೆ ಮಂಗಳೂರು ಇದರ ಆಶ್ರಯದಲ್ಲಿ ಮಾಣಿ ಗ್ರಾಮ ಪಂಚಾಯತ್ ನ ನೂತನ ಸದಸ್ಯರಿಗೆ ನಡೆದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತರಬೇತುದಾರರಾಗಿ ರಾಜ್ಯತರಬೇತುದಾರ, ನಿವೃತ್ತ ಶಿಕ್ಷಕ ಜಯಾನಂದ ಪೆರಾಜೆಯವರು ಸ್ಥಳೀಯ ಸರಕಾರದ ಆಡಳಿತದಲ್ಲಿ ಮಕ್ಕಳು ಎನ್ನುವ ವಿಚಾರದಲ್ಲಿ ಮಾತನಾಡಿ, ಸ್ಥಳೀಯ ಸರಕಾರವಾದ ಗ್ರಾಮ ಪಂಚಾಯತ್ ತಮ್ಮ ಆಡಳಿತ ಕ್ಷೇತ್ರದಲ್ಲಿ ಮಕ್ಕಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಅರಿತುಕೊಂಡು ಅದಕ್ಕೆ ಶೀಘ್ರವಾಗಿ ಸ್ಪಂದಿಸಬೇಕು ಮತ್ತು ಅದು ಪಂಚಾಯತ್ ನ ಜವಾಬ್ದಾರಿ ಕೂಡಾ ಎಂದು ಹೇಳಿದರು.
ಪಡಿ ಸಂಸ್ಥೆಯ ಜಿಲ್ಲಾ ಸಂಯೋಜಕಿ ಲಲಿತಾರವರು ಪ್ರಾಸ್ತಾವಿಕವಾಗಿ ಮಾತನಾಡಿದರು ಮತ್ತು ಮುಂದೆ ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ಕ್ರಿಯಾಯೋಜನೆಯನ್ನೂ ರೂಪಿಸಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಹರೀಶ್ ಮಾಣಿ, ಗ್ರಾಮ ಪಂಚಾಯತ್ ನ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮತ್ತು ಶಿಕ್ಷಕರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಗಟ್ಟಿಯವರು ಸ್ವಾಗತಿಸಿದರು.