ಪ್ರತೀಕಾರದ ಧ್ವೇಷ ರಾಜಕೀಯ ನಡೆಸಿರುವುದೇ ಬಿಜೆಪಿಯ ಸಾಧನೆ-ಧನಂಜಯ ಅಡ್ಪಂಗಾಯ…..
ಪುತ್ತೂರು; ದೇಶದ 27 ಬ್ಯಾಂಕ್‍ಗಳನ್ನು 12 ಬ್ಯಾಂಕ್‍ಗಳಾಗಿ ಮಾಡಿದ್ದು, ಕೈಗಾರಿಕೆ-ಉದ್ಯಮಗಳು ನೆಲಕಚ್ಚುವಂತಹ ಸ್ಥಿತಿ ನಿರ್ಮಾಣ, ನೆರೆ ಸಂತ್ರಸ್ತರಿಗೆ ಚಿಕ್ಕಾಸು ಹಣ ಬಿಡುಗಡೆ ಮಾಡದಿರುವುದು, ದಕ್ಷ ಅಧಿಕಾರಿಗಳ ರಾಜೀನಾಮೆಯ ವಾತಾವರಣ ಸೃಷ್ಠಿಸಿದ್ದು, ಪ್ರತೀಕಾರದ ಧ್ವೇಷ ರಾಜಕೀಯ ನಡೆಸಿರುವುದೇ ಬಿಜೆಪಿ ಸಾಧನೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಧನಂಜಯ ಅಡ್ಪಂಗಾಯ ಅವರು ಟೀಕಿಸಿದರು.
ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ನೆರೆ ಪೀಡಿತ ಜಿಲ್ಲೆಯ ಪ್ರದೇಶಗಳಿಗೆ ಚಿಕ್ಕಾಸು ಹಣ ನೀಡಿಲ್ಲ. ಜಿಲ್ಲೆಯಲ್ಲಿ ಹೆಚ್ಚಿನ ಹಾನಿಯಾಗಿರುವ ಬೆಳ್ತಂಗಡಿಗೆ ಮುಖ್ಯಮಂತ್ರಿಗಳು ಭೇಟಿ ನೀಡಿಲ್ಲ. ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬಂದಿದ್ದರೂ ಪ್ರವಾಹ ಪರಿಸ್ಥಿತಿಯ ಬಗ್ಗೆ ಅವಲೋಕಿಸುವ ಗೋಜಿಗೆ ಹೋಗಿಲ್ಲ. ನೆರೆ ಸಂತ್ರಸ್ತರ ಸಮಸ್ಯೆಗಳಿಗೆ ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಸ್ಪಂದಿಸಿಲ್ಲ ಎಂದು ಅವರು ಆರೋಪಿಸಿದರು.
ಕಾರ್ತಿಕ್ ಸುವರ್ಣ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಪ್ರಮುಖರೇ ಭಾಗಿಯಾಗಿದ್ದಾರೆ ಎಂದು ಮೃತರ ಸಂಬಂಧಿಕರೇ ಸಂಶಯ ವ್ಯಕ್ತಪಡಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಮೃತನ ಕುಟುಂಬಕ್ಕೆ ರೂ. 10 ಲಕ್ಷ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ ಧನಂಜಯ ಅಡ್ಪಂಗಾಯ ಅವರು, ಕೋಮುಗಲಭೆಯಲ್ಲಿ ಹತ್ಯೆಯಾದವರಿಗೆ ಪರಿಹಾರ ಕೇಳುವ ಬಿಜೆಪಿಗರು ಈಗ ಮಾತನಾಡುತ್ತಿಲ್ಲ ಎಂದು ದೂರಿದರು.
ಪ್ರಜಾಪ್ರಭುತ್ವದ ಮೌಲ್ಯವನ್ನು ರಕ್ಷಿಸುವ, ಸಮಾಜದ ಸುಧಾರಣೆಗಾಗಿ ಎಚ್ಚರಿಕೆ ನೀಡುವ ಸೆಂಥಿಲ್ ಅಂತಹ ಅಧಿಕಾರಿಗಳನ್ನು ಇವರು ದೇಶದ್ರೋಹಿ ಎನ್ನುತ್ತಾರೆ. ಮಹಾತ್ಮಾಗಾಂಧಿಯನ್ನು ಕೊಂದ ಗೋಡ್ಸೆ ಇವರಿಗೆ ದೇಶಪ್ರೇಮಿಯಾಗುತ್ತಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಸೆಂಥಿಲ್ ಅವರನ್ನು ದೇಶದ್ರೋಹಿ ಎಂದು ಹೇಳಿದ್ದಾರೆ. ಆದರೆ ಬಿಜೆಪಿಯವರೇ ನಿಜವಾದ ದೇಶದ್ರೋಹಿಗಳು. ಸರಿಯಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡದೆ ಸಸಿಕಾಂತ್ ಸಿಂಥಿಲ್ ಅವರಂತಹ ಪ್ರಾಮಾಣಿಕ ಐಎಎಸ್ ಅಧಿಕಾರಿಗಳು ರಾಜೀನಾಮೆ ನೀಡುವಂತಹ ಒತ್ತಡದ ವಾತಾವರಣ ನಿರ್ಮಾಣ ಮಾಡಿದ್ದು ನಮ್ಮ ದುರಂತ ಎಂದರು.
ನೆರೆ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಮಂಗಳವಾರ ಬೆಳಿಗ್ಗೆ 11ರಿಂದ ಅಪರಾಹ್ನ 2 ಗಂಟೆ ತನಕ ಪುತ್ತೂರಿನ ಬಸ್‍ನಿಲ್ದಾಣದ ವಠಾರದ ಗಾಂಧಿಕಟ್ಟೆಯ ಬಳಿ ಕಾಂಗ್ರೆಸ್ ವತಿಯಿಂದ ಧರಣಿ ಪ್ರತಿಭಟನೆ ನಡೆಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರಳೀಧರ್ ರೈ ಮಠಂತಬೆಟ್ಟು, ಕೆಪಿಸಿಸಿ ಸದಸ್ಯ ಎಂ.ಬಿ.ವಿಶ್ವನಾಥ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಹಿರಿಯ ಕಾಂಗ್ರೆಸ್ ಮುಖಂಡ ಗಂಗಾಧರ ಗೌಡ ಕೆಮ್ಮಾರ, ಅಮಳ ರಾಮಚಂದ್ರ ಉಪಸ್ಥಿತರಿದ್ದರು.