ಯೆನೆಪೋಯ ಇಂಜಿನಿಯರಿಂಗ್ ಕಾಲೇಜು – NSS ವಾರ್ಷಿಕ ವಿಶೇಷ ಶಿಬಿರ….
ಮೂಡುಬಿದ್ರಿ: ಇಲ್ಲಿನ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಅಶ್ವತ್ಥಪುರದ ವಾಣಿ ವಿಳಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾ.15 ರಿಂದ 21 ರ ತನಕ ನಡೆಯಲಿದ್ದು, ಈ ಶಿಬಿರದ ಉದ್ಘಾಟನೆ ಇಂದು (ಮಾ.15) ಶಾಲೆಯ ಸಭಾಂಗಣದಲ್ಲಿ ನಡೆಯಿತು.
ವಾಣಿ ವಿಳಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿ. ಟಿ. ಗೀತಾ ಶಿಬಿರವನ್ನು ಉದ್ಘಾಟಿಸಿದರು, ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಆರ್.ಜಿ. ಡಿಸೋಜಾ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಚಿನ್ಹೆ ಮತ್ತು ನಿಸ್ವಾರ್ಥ ಸೇವೆಯ ಮಹತ್ವವನ್ನು ವಿವರಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಚಿನ್ಹೆ ಚಕ್ರವಾಗಿದ್ದು, ಚಲನಶೀಲತೆಯ ಸಂಕೇತವಾಗಿದೆ.ವಿದ್ಯಾರ್ಥಿ ಬದುಕಿನಲ್ಲೂ ಚಲನಶೀಲತೆ ಇರಬೇಕೆಂಬುದು ಇದರ ಉದ್ದೇಶ ಎಂದರಲ್ಲದೆ ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯದೊಂದಿಗೆ ಪ್ರತಿಫಲಾಪೇಕ್ಷೆಯಿಲ್ಲದೆ ಸೇವಾ ಕಾರ್ಯ ಹಮ್ಮಿಕೊಳ್ಳಲಾಗುತ್ತದೆ. ಹಾಗಾಗಿ ರಾಷ್ಟ್ರೀಯ ಸೇವಾ ಯೋಜನೆಯ ಸದಸ್ಯರು ನಿಜವಾದ ದೇಶ ಕಟ್ಟುವ ಕೆಲಸ ಮಾಡುತ್ತಾರೆ ಎಂದರು.
ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಶಾಹಿದ್, ಗ್ರಾ. ಪಂ. ಸದಸ್ಯ ಕರುಣಾಕರ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಪ್ರೊ. ಶ್ರೀನಿವಾಸ, SDMC ಅಧ್ಯಕ್ಷ ಪ್ರಭಾಕರ ಚೌಟ ಮುಖ್ಯ ಅತಿಥಿಗಳಾಗಿದ್ದರು.
ಶಿಬಿರಾರ್ಥಿಗಳಾದ ಶ್ರವಣ್ ಭಂಡಾರಿ ಸ್ವಾಗತಿಸಿದರು. ಸಹನಾ ಪ್ರಾರ್ಥಿಸಿದರು. ಶ್ರೀನಿಧಿ ಧನ್ಯವಾದ ಸಮರ್ಪಿಸಿದರು. ಸಂಶೀರಾ ಕಾರ್ಯಕ್ರಮ ನಿರೂಪಿಸಿದರು. ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಸುಮಾರು 38 ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.
ಪರಿಸರ ನೈರ್ಮಲ್ಯ,ಆರೋಗ್ಯ ಜಾಗೃತಿ, ವ್ಯಕ್ತಿತ್ವ ವಿಕಸನ, ವೈಜ್ಞಾನಿಕ ಅರಿವು, ಆಟದ ಮೈದಾನ ಮತ್ತು ಕೈತೋಟದ ಅಭಿವೃದ್ಧಿ, ಮಾದಕ ವ್ಯಸನದ ಜಾಗೃತಿ ಕಾರ್ಯಕ್ರಮ , ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಪ್ರಥಮ ಚಿಕಿತ್ಸೆ ಶಿಬಿರದ ಯೋಜನೆಗಳಾಗಿವೆ.