ಸ್ವ ಉದ್ಯಮೀಕರಣ ಮತ್ತು ಕೈಗಾರಿಕಾ ಮಾಹಿತಿ ಶಿಬಿರ….
ಪುತ್ತೂರು: ಪ್ರಸ್ತುತ ದಿನಗಳಲ್ಲಿ ಕೈಗಾರಿಕಾ ತರಬೇತಿ ಪಡೆದ ಅನೇಕ ಮಂದಿ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುತ್ತಾರೆ ಹೊರತು ಸ್ವಂತ ಊರಿನಲ್ಲಿ ಸ್ವ ಉದ್ಯೋಗದ ಕುರಿತು ಚಿಂತನೆ ಅವರಲ್ಲಿ ಮೂಡುತ್ತಿಲ್ಲ. ವಿದ್ಯಾರ್ಥಿಗಳು ಕೈಗಾರಿಕಾ ತರಬೇತಿ ಪಡೆದು ಅನೇಕ ಕನಸ್ಸನ್ನು ಹೊತ್ತಿರುತ್ತಾರೆ. ಆ ಕನಸಿಗೆ ಪೂರ್ಣ ಬೆಂಬಲ ಅಗತ್ಯ ಎಂದು ಕೈಗಾರಿಕಾ ಸಂಘದ ಅಧ್ಯಕ್ಷ ಶಿವಶಂಕರ್ ಭಟ್ ಹೇಳಿದರು.
ಅವರು ಶ್ರೀ ಮಹಾಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ಪುತ್ತೂರು ಮತ್ತು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಮಹಿಳಾ) ನರಿಮೊಗರು ಇಲ್ಲಿನ ಸಂಸ್ಥೆಗಳ ತರಬೇತುದಾರರಿಗೆ ಮತ್ತು ತರಬೇತಿ ಪಡೆದವರಿಗೆ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ಸೋಮವಾರ ನಡೆದ ಕೌಶಲ್ ಸ್ವ ಉದ್ಯಮೀಕರಣ ಮತ್ತು ಕೈಗಾರಿಕಾ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಊರಿನಲ್ಲಿ ಉದ್ಯಮಗಳು ಬೆಳೆಯಬೇಕಾದರೆ ಕೈಗಾರಿಕಾ ತರಬೇತಿ ಪಡೆದವರು ಸ್ವ ಉದ್ಯಮ ಸೃಷ್ಠಿ ಮಾಡಬೇಕು. ಇಂತಹ ಉದ್ಯಮದ ಅನೇಕ ಕನಸು ಹೊತ್ತುಕೊಂಡು ನಮ್ಮಲ್ಲಿಗೆ ಬಂದಾಗ ನಾವು ಅದಕ್ಕೆ ಸರಿಯಾದ ಮಾರ್ಗದರ್ಶನ ನೀಡುತ್ತೇವೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಹೆಚ್.ಡಿ.ಶಿವರಾಮ್ ಅವರು ಮಾತನಾಡಿ ಸ್ವ ಉದ್ಯಮೀಕರಣ ಇವತ್ತಿನ ದಿನಗಳಲ್ಲಿ ಆಗಬೇಕೆಂಬ ನಿಟ್ಟಿನಲ್ಲಿ ನಮ್ಮ ಪ್ರಧಾನ ಮಂತ್ರಿಯವರು ಅನೇಕ ಯೋಜನೆ ರೂಪಿಸಿದ್ದಾರೆ ಇದರ ಸದುಪಯೋಗವನ್ನು ಎಲ್ಲರು ಪಡೆಯಬೇಕೆಂದರು.
ಈ ಸಂದರ್ಭದಲ್ಲಿ ಎಸ್.ಆರ್.ಕೆ. ಲ್ಯಾಡರ್ಸ್ ಮುಕ್ರಂಪಾಡಿಯ ಮಾಲಕ ಕೇಶವ ಗೌಡ ಅವರನ್ನು ಸನ್ಮಾನಿಸಲಾಯಿತು.
ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಸಿಂಡಿಕೇಟ್ ಬ್ಯಾಂಕ್‍ನ ರೀಜನಲ್ ಮೆನೇಜರ್ ರಾಘವೇಂದ್ರ, ನರಿಮೊಗರು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ನಿಯೋಜಿತ ಪ್ರಾಂಶುಪಾಲೆ ರಾಜೀವಿ, ಶ್ರೀ ಮಹಾಲಿಂಗೇಶ್ವರ ಐಟಿಐ ಪ್ರಾಂಶುಪಾಲ ಭವಾನಿ ಗೌಡ, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಪುರುಷೊತ್ತಮ ಮುಂಗ್ಲಿಮನೆ, ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಕಣಜಾಲು, ಕೈಗಾರಿಕಾ ಸಂಘದ ಉಪಾಧ್ಯಕ್ಷ ಮೋಹನ್ ಕುಮಾರ್, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಗೌರವಾಧ್ಯಕ್ಷ ಎ.ವಿ.ನಾರಾಯಣ, ಒಕ್ಕಲಿಗ ಗೌಡ ಸಮುದಾಯ ಭವನದ ಉಸ್ತುವಾರಿ ಪ್ರೇಮಾನಂದ ಮತ್ತಿತರರು ಉಪಸ್ಥಿತರಿದ್ದರು.
ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರಾಧಾಕೃಷ್ಣ ಗೌಡ ನಂದಿಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಜಯಂತ್ ವೈ ಚಾರ್ವಾಕ ವಂದಿಸಿದರು. ಉದಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.