ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಪ್ರಥಮ ವರ್ಷದ ವಿದ್ಯಾರ್ಥಿಗಳ ಉದ್ದೀಪನಾ ಸಮಾರಂಭ…
ಪುತ್ತೂರು: ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ನಿಯಂತ್ರಿತ ಬಳಕೆ, ಮನಸ್ಸಿನ ನಿಯಂತ್ರಣ, ನಕಾರಾತ್ಮಕ ವಿಚಾರಗಳನ್ನು ದೂರವಿಡುವುದರೊಂದಿಗೆ ಮಾನಸಿಕ ಶಾಂತತೆಯನ್ನು ಕಾಪಾಡಿಕೊಳ್ಳುವುದು ಆವಶ್ಯಕ ಎಂದು ಹೆಸರಾಂತ ಸಲಹೆಗಾರ್ತಿ ಪ್ರೀತಿ ಶೆಣೈ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಅಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲವಿಜ್ಞಾನ ವಿಭಾಗ, ಕುಂದುಕೊರತೆ ನಿವಾರಣಾ ಕೋಶ ಮತ್ತು ಪೋಷಕ ಸಂಬಂಧ ಕೋಶಗಳ ಸಂಯುಕ್ತ ಆಶ್ರಯದಲ್ಲಿ ಶ್ರೀರಾಮ ಸಭಾಭವನದಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಉದ್ದೀಪನಾ ಸಮಾರಂಭದಲ್ಲಿ ಮನಸ್ಸು ಮತ್ತು ದೇಹವನ್ನು ಸಮತೋಲನಗೊಳಿಸುವುದರಿಂದಾಗುವ ಸಮಾಧಾನಗಳು ಎನ್ನುವ ವಿಷಯದ ಬಗ್ಗೆ ಮಾತಾಡಿದರು. ಶಾಂತ ಮನಸ್ಸು ಬದುಕಿಗೆ ಹೆಚ್ಚು ಸ್ಪಷ್ಟತೆಯನ್ನು ನೀಡುತ್ತದೆ. ಈ ಶಾಂತತೆಯನ್ನು ಪಡೆಯುವುದಕ್ಕೆ ಕೆಲವು ವ್ಯಾಯಾಮಗಳು ಮತ್ತು ವಿಶ್ರಾಂತಿ ಅಗತ್ಯ. ದೈನಂದಿನ ಜೀವನದಲ್ಲಿ ಯೋಗ ಮತ್ತು ಧ್ಯಾನದ ಆವಶ್ಯಕತೆಯ ಬಗ್ಗೆ ತಿಳಿಸಿದ ಅವರು ಅವುಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಪ್ರಾಯೋಗಿಕ ತರಬೇತಿಯನ್ನು ನೀಡಿದರು. ಈ ಅಭ್ಯಾಸಗಳು ವಿದ್ಯಾರ್ಥಿಯ ಏಕಾಗ್ರತೆಯನ್ನು ಹೆಚ್ಚಿಸುವುದರ ಜತೆಯಲ್ಲಿ ನಿಗದಿತ ಗುರಿಯನ್ನು ತಲಪಲು ಸಹಕಾರಿಯಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ, ಮೂಲವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ರಮಾನಂದ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೋಷಕ ಸಂಬಂಧ ಕೋಶದ ಸಂಚಾಲಕಿ ಪ್ರೊ.ಶ್ವೇತಾಂಬಿಕಾ.ಪಿ, ಕುಂದುಕೊರತೆ ನಿವಾರಣಾ ಕೋಶದ ಸಂಚಾಲಕಿ ಪ್ರೊ.ಮಾಧವಿ.ಆರ್.ಪೈ, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡರು.
ವಿದ್ಯಾರ್ಥಿಗಳಾದ ಎಸ್.ಯು.ತೇಜಸ್ ಸ್ವಾಗತಿಸಿ, ಧನುಶ್ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ಯಶ್ವಿತಾ ವಂದನಾರ್ಪಣೆಗೈದರು. ಭುವನೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು.