ಜಂಇಯ್ಯತುಲ್ ಮುಅಲ್ಲಿಮೀನ್ ಕಾರ್ಯ ಶ್ಲಾಘನೀಯ- ಟಿ. ಎಂ. ಶಹೀದ್ ತೆಕ್ಕಿಲ್…
ಸುಳ್ಯ: ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮೇನೇಜ್ ಮೆಂಟ್ ಅಸೋಸಿಯೇಷನ್ ಇದರ ಜಂಟಿ ಆಶ್ರಯದಲ್ಲಿ ತಹ್’ಖೀಖ್-2021 ರೇಂಜ್ ವಿಶೇಷ ಸಭೆ ಹಾಗೂ ಮುಅಲ್ಲಿಂ ಡೇ ಆಚರಣೆ ಸುಳ್ಯದ ಗ್ರಾಂಡ್ ಪರಿವಾರ್ ಹಾಲ್ ನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಅರಂತೋಡು ಇದರ ಸ್ಥಾಪಕಾಧ್ಯಕ್ಷರು ಟಿ. ಎಂ. ಶಹೀದ್ ತೆಕ್ಕಿಲ್ ಮಾತನಾಡಿ “ಮುಅಲ್ಲಿಂಗಳು ಮದರಸ ವಿದ್ಯಾರ್ಥಿಗಳಿಗೆ ಶಿಸ್ತು ಪಾಠವನ್ನು ಕಲಿಸುತ್ತಿದ್ದಾರೆ. ದೇಶ ಪ್ರೇಮ ಮತ್ತು ದೇಶದ ರಕ್ಷಣೆಯ ಪಾಠವನ್ನು ಬೋಧಿಸುವ ಇವರು, ಹೊರಗಿನ ಜಗತ್ತು ಏನೇ ಹೇಳಿದರು ತಮ್ಮ ಕರ್ತವ್ಯವನ್ನು ಚಾಚು ತಪ್ಪದೇ ಮಾಡುತಿದ್ದಾರೆ” ಎಂದು ಹೇಳಿದರು. ಜಂಞಯ್ಯತುಲ್ ಮುಅಲ್ಲಿಮೀನ್ ಕೊರೋನ ಲಾಕ್‌ಡೌನ್ ಸಂದರ್ಭ ಮದರಸಗಳನ್ನು ಮುಚ್ಚಿದ ಸಮಯದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಆಗಬಾರದು ಎಂದು ಸುಮಾರು 1 ಕೋಟಿ ಖರ್ಚಿನಲ್ಲಿ ಆನ್ ಲೈನ್ ಕ್ಲಾಸ್ ಪ್ರಾರಂಭಿಸಿದರು ಮತ್ತು ಆರ್ಥಿಕ ಸಂಕಷ್ಟಕ್ಕೊಳಗಾದ ಮುಅಲ್ಲಿಂರಿಗೆ 3 ಕೋಟಿಯಷ್ಟು ಧನಸಹಾಯ ನೀಡಿತು ಎಂದು ಜಂಞಯ್ಯತುಲ್ ಮುಲ್ಲಿಂಮೀನ್ ನ ಕಾರ್ಯಗಳನ್ನು ಶ್ಲಾಘಿಸಿದರು. ಮುಅಲ್ಲಿಂ ಡೇ ಆಚರಣೆಯ ಸಲುವಾಗಿ ಮದರಸದಲ್ಲಿ ಕಲಿಸುತ್ತಿರುವ ಅಧ್ಯಾಪಕರ ಕ್ಷೇಮಕ್ಕಾಗಿ “ಮುಅಲ್ಲಿಂ ರಿಲೀಫ್ ಫಂಡ್” ಗೆ ಟಿ. ಎಂ. ಶಹೀದ್ ತೆಕ್ಕಿಲ್ ರವರು 10,000 ರೂ ನೀಡುವುದರ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮವು ಸುಳ್ಯ ರೇಂಜ್ ಮದ್ರಸ ಮೇನೇಜ್ ಮೆಂಟ್ ಅಸೋಸಿಯೇಷನ್ ಅಧ್ಯಕ್ಷರಾದ ತಾಜ್ ಮುಹಮ್ಮದ್ ಸಂಪಾಜೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ಖಾದರ್ ಫೈಝಿ ಐವರ್ನಾಡ್ ಉದ್ಘಾಟಿಸಿದರು. ಮುಫತ್ತಿಶ್ ಉಮರುಲ್ ಫಾರೂಕ್ ದಾರಿಮಿ ತೆಕ್ಕಾರು ವಿಷಯ ಮಂಡಿಸಿದರು. ಇಸ್ಹಾಕ್ ಬಾಖವಿ ಅರಂತೋಡು ದುಆ ನೆರವೇರಿಸಿದರು. ಸುನ್ನಿ ಮಹಲ್ ಅಧ್ಯಕ್ಷರಾದ ಮಂಡೆಕೋಲು ಇಬ್ರಾಹಿಂ ಹಾಜಿ ಕತ್ತರ್, ಮೇನೇಜ್ ಮೆಂಟ್ ಕೋಶಾಧಿಕಾರಿ ಅಬ್ದುಲ್ ಹಮೀದ್ ಹಾಜಿ ಸುಳ್ಯ, ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮೇನೇಜ್ ಮೆಂಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಂಇಯ್ಯತುಲ್ ಮುಅಲ್ಲಿಮೀನ್ ಪ್ರ. ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಸ್ವಾಗತಿಸಿ ಮೇನೇಜ್ ಮೆಂಟ್ ಪ್ರ. ಕಾರ್ಯದರ್ಶಿ ಯು. ಪಿ. ಬಶೀರ್ ಬೆಳ್ಳಾರೆ ವಂದಿಸಿದರು.