ಪುತ್ತೂರು ಸಿಡಿಪಿಒ ಇಲಾಖೆಯಿಂದ ತಾಲೂಕು ಮಟ್ಟದ ವಿವಿಧ ಸಮಿತಿಗಳ ಸಭೆ…..
ಪುತ್ತೂರು:ಗ್ರಾಮ ಪಂಚಾಯತ್‍ಗಳಲ್ಲಿ ನಡೆಯುತ್ತಿರುವ ಮಹಿಳಾ ಗ್ರಾಮಸಭೆ ಮತ್ತು ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಮಕ್ಕಳ ಸಮಸ್ಯೆಗಳನ್ನು ಆಲಿಸಲು ಸಿಡಿಪಿಒ ಇಲಾಖೆಯವರು ಬಿಟ್ಟರೆ ಬೇರೆ ಯಾವ ಇಲಾಖೆಯ ಅಧಿಕಾರಿಗಳೂ ಬರುತ್ತಿಲ್ಲ. ಸಭೆಯಲ್ಲಿ ಮಾಹಿತಿ ಕೋಡುವವರೇ ಇಲ್ಲ, ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಕೇವಲ ಕಾಟಾಚಾರಕ್ಕಾಗಿ ಮಾತ್ರ ನಡೆಸಲಾಗುತ್ತಿದೆ. ಈ ಸಭೆಗಳನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸೋಮವಾರ ಸಿಡಿಪಿಒ ಇಲಾಖೆಯಿಂದ ತಾಲೂಕು ಮಟ್ಟದ ವಿವಿಧ ಸಮಿತಿಗಳ ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.
ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ತಹಶೀಲ್ದಾರ್ ಅನಂತಶಂಕರ್ ಅವರ ಅಧ್ಯಕ್ಷತೆಯಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ, ಮಾದಕ ವಸ್ತುಗಳ ಸೇವನೆ ನಿಷೇಧ, ಸ್ತ್ರೀಶಕ್ತಿ ಯೋಜನೆಗಳ ಸಮನ್ವಯ ಸಮಿತಿ, ಬಾಲ್ಯ ವಿವಾಹ ನಿಷೇಧ ಸಮಿತಿ, ಮಕ್ಕಳ ಮಾರಾಟ ಮತ್ತು ಸಾಗಾಟ ತಡೆ, ಭಾಗ್ಯ ಲಕ್ಷ್ಮಿ ಯೋಜನೆಯ ಕಾರ್ಯಪಡೆ, ಕೌಟುಂಬಿಕ ದೌರ್ಜನ್ಯ ತಡೆ,ಮಕ್ಕಳ ರಕ್ಷಣಾ ಸಮಿತಿ, ವಿಕಲಚೇತನರ ಸಮಿತಿ, ಮಹಿಳಾ ದೌರ್ಜನ್ಯ ತಡೆ, ಮಾತೃ ವಂದನಾ ಸಮಿತಿ,ಭೇಟಿ ಪಡಾವೋ-ಭೇಟಿ ಬಚಾವೋ ಸಮಿತಿ ಹಾಗೂ ಗೆಳತಿ ವಿಶೇಷ ಚಿಕಿತ್ಸಾ ಘಟಕ ಸಮಿತಿಗಳ ತಾಲೂಕು ಮಟ್ಟದ ಸಭೆ ನಡೆಯಿತು.
ತಾಲೂಕಿನಲ್ಲಿ ಕಳೆದ 3 ತಿಂಗಳಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿ 4 ಕೇಸುಗಳು ಬಂದಿವೆ. ಕಡಬದಲ್ಲಿ ಬಾಲ್ಯ ವಿವಾಹ ನಡೆದ ಬಳಿಕ ಪ್ರಕರಣ ನಮ್ಮ ಗಮನಕ್ಕೆ ಬಂದಿದೆ. ಕಳೆದ 3 ತಿಂಗಳ ಅವಧಿಯಲ್ಲಿ 11 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಬಂದಿದ್ದು, ಆ ಪೈಕಿ 9 ಪ್ರಕರಣಗಳು ಇತ್ಯರ್ಥಗೊಂಡಿವೆ. 3 ಪ್ರಕರಣಗಳನ್ನು ನ್ಯಾಯಾಲಯಕ್ಕೆ ಕಳುಹಿಸಲಾಗಿದೆ. ಮಹಿಳಾ ಸಾಂತ್ವಾನ ಕೇಂದ್ರಕ್ಕೆ 3 ತಿಂಗಳ ಅವಧಿಯಲ್ಲಿ ಒಟ್ಟು 33 ಪ್ರಕರಣಗಳು ಬಂದಿದ್ದು,23 ಪ್ರಕರಣಗಳನ್ನು ಬಗೆಹರಿಸಲಾಗಿದೆ. 2 ಪ್ರಕರಣಗಳು ಬಗೆಹರಿಯುವ ಹಂತದಲ್ಲಿದೆ ಎಂದು ಎಂದು ಪ್ರಭಾರ ಸಿಡಿಪಿಒ ಭಾರತಿ ಜೆ ಅವರು ಸಭೆಗೆ ಮಾಹಿತಿ ನೀಡಿದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ವಿವಿಧ ಸಮಿತಿಗಳ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.