ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ-ತಹಸೀಲ್ದಾರ್ ಅನಂತ ಶಂಕರ್….
ಪುತ್ತೂರು: ಸರ್ಕಾರವು ಆಯುಷ್ಮಾನ್ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಆರ್ಥಿಕವಾಗಿ ಹಿಂದುಳಿದ ಜನರನ್ನು ಸದೃಢಗೊಳಿಸುವ ಕೆಲಸ ಮಾಡುತ್ತಿದ್ದು, ಸಾರ್ವಜನಿಕರು ಈ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು ಎಂದು ಪುತ್ತೂರು ತಹಸೀಲ್ದಾರ್ ಅನಂತ ಶಂಕರ್ ಹೇಳಿದರು.
ಅವರು ಸೋಮವಾರ ಪುತ್ತೂರು ನಗರಸಭೆಯ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಂಗಳೂರು, ಸ್ವರ್ಣೋದಯ ನಿರಂತರ ಉಳಿತಾಯ ಗುಂಪುಗಳ ಒಕ್ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಪುರಭವನದಲ್ಲಿ ನಡೆದ ಡೇ ನಲ್ಮ್ ಯೋಜನೆಯ ಸ್ವಸಹಾಯ ಗುಂಪುಗಳಿಗೆ ಆರೋಗ್ಯ ತಪಾಸಣೆ, ಆಯಷ್ಮಾನ್ ಭಾರತ್ ಗುರುತಿನ ಚೀಟಿ ವಿತರಣೆ, ಪೋಷಣ್ ಅಭಿಯಾನ್ ಮಾಸಾಚರಣೆ, ಆರೋಗ್ಯವಂತ ಶಿಶುಗಳ ಸ್ಪರ್ಧೆ ಹಾಗೂ ಪೌಷ್ಠಿಕ ಆಹಾರ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಐರಿನ್ ರೆಬೆಲ್ಲೋ ಮಾತನಾಡಿ ಡೇ ನಲ್ಮ್ ಯೋಜನೆಯು ಎಲ್ಲಾ ನಗರಾಡಳಿತದಲ್ಲಿ ನಡೆಯುತ್ತಿದೆ. ಇದರಡಿಯಲ್ಲಿ ಎಸ್‍ಎಚ್‍ಜಿ ಪರಿವಾರ್ ಯೋಜನೆ ಕಾರ್ಯಗತಗೊಂಡಿದ್ದು, ಈ ಯೋಜನೆಯು ಮಹಿಳೆಯರಿಗೆ ಸಾಕಷ್ಟು ಸಹಕಾರಿಯಾಗಿದೆ. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಶಿಕ್ಷಣ, ಕೌಶಲ್ಯಾಭಿವೃದ್ಧಿ ಪಡೆಯುವುದರ ಜೊತೆಗೆ ಸ್ವ ಉದ್ಯೋಗಗಳನ್ನು ಮಾಡುತ್ತಾ ಸ್ವಾವಲಂಬಿ ಬದುಕು ಕಾಣಲು ಸಾಧ್ಯವಿದೆ. ಬಡ ಕುಟುಂಬಗಳ ಸರ್ವತೋಮುಖ ಬೆಳವಣಿಗೆಗೆ ಡೇ ನಲ್ಮ್ ಯೋಜನೆ ಪ್ರಯೋಜನಕಾರಿಯಾಗಿದ್ದು ಮಹಿಳೆಯರ ಜೀವನೋಪಾಯ ಹಾಗೂ ಸಂರಕ್ಷಣೆಗೆ ಸಹಕಾರಿಯಾಗಿದೆ ಎಂದರು.
ಪೌರಾಯುಕ್ತೆ ರೂಪಾ ಟಿ ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ಜಲಜಾಕ್ಷಿ, ಸ್ವರ್ಣೋದಯ ನಿರಂತರ ಉಳಿತಾಯ ಗುಂಪುಗಳ ಒಕ್ಕೂಟದ ಅಧ್ಯಕ್ಷೆ ಯಮುನಾ, ನಗರಸಭಾ ಸಹಾಯಕ ಅಭಿಯಂತರ ಅರುಣ್, ಕೆಎಂಸಿ ಆಸ್ಪತ್ರೆಯ ವೈದ್ಯರಾದ ಡಾ. ಅಹನಾ, ಡಾ. ಐಶ್ವರ್ಯಾ, ಡಾ. ಜಲೀಮಾ ಮತ್ತು ಡಾ. ಕೃತಿ ಉಪಸ್ಥಿತರಿದ್ದರು. ನಗರಸಭಾ ಕಂದಾಯ ನಿರೀಕ್ಷಕ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.