ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು -ವಾರ್ಷಿಕೋತ್ಸವ ಸಮಾರಂಭ ನವರಂಗ್-2025…

ಪುತ್ತೂರು: ತಾಂತ್ರಿಕತೆ ಬಹಳ ಮುಂದುವರಿದಿದೆ, ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಗಳ ಕಣಜವೇ ಸಿಗುತ್ತದೆ. ಅದರಲ್ಲಿ ಕೆಟ್ಟದ್ದೂ ಇದೆ ಒಳ್ಳೆಯದೂ ಇದೆ. ಅದರ ಬಳಕೆಯಲ್ಲಿ ಬುದ್ದಿವಂತಿಕೆಯನ್ನು ತೋರಿಸಿದರೆ ನಮ್ಮ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳಬಹುದು ಎಂದು ವೆಂಚೂರ್‍ಸಾಫ್ಟ್ ಗ್ಲೋಬಲ್ ಯುಎಸ್‍ಎ ಇದರ ಮುಖ್ಯ ಕಾರ್ಯನಿರ್ವಣಾಧಿಕಾರಿ ಅಗರ್ತ ವೆಂಕಟ್ರಮಣ ಭಟ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಮಾ.22 ರಂದು ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭ ನವರಂಗ್-2025 ಇದರ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾಲೇಜು ಜೀವನ ಅತಿ ಮುಖ್ಯವಾದದ್ದು ಅಲ್ಲಿನ ಘಟನೆಗಳನ್ನು ನಾವು ಯಾವತ್ತೂ ಮರೆಯುವುದಕ್ಕೆ ಸಾಧ್ಯವಿಲ್ಲ. ಸಮಾಜದಲ್ಲಿ ವ್ಯಕ್ತಿಯೊಬ್ಬನನ್ನು ಗುರುತಿಸುವುದು ಅವನ ಶ್ರೀಮಂತಿಕೆಯಿಂದಲ್ಲ, ಬದಲಿಗೆ ಅವನ ವ್ಯಕ್ತಿತ್ವದಿಂದ. ನಿಮ್ಮ ನಡತೆ, ವ್ಯವಹಾರ ಮತ್ತು ಸಂಪರ್ಕ ಉತ್ತಮವಾಗಿದ್ದರೆ ಸಮಾಜದಲ್ಲಿ ನೀವು ಉನ್ನತರಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಮರ್ಸಿಡಿಸ್ ಬೆಂಜ್ ರೀಸರ್ಚ್ ಎಂಡ್ ಡೆವೆಲಪ್‍ಮೆಂಟ್ ಇಂಡಿಯಾ ಇದರ ಸೀನಿಯರ್ ಕನ್ಸಲ್ಟೆಂಟ್ ಹಾಗೂ ಇಂಜಿನಿಯರಿಂಗ್ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಶ್ರೀಮತಿ ತನ್ವಿ.ಡಿ.ಐ ಕಾಲೇಜಿನಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಸವಿನೆನಪುಗಳನ್ನು ಮೆಲುಕು ಹಾಕಿದರು. ತಾನು ಈ ಕಾಲೇಜಿನಲ್ಲಿ ಕಲಿತ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು, ಕಾರ್ಯಕ್ರಮ ನಿರ್ವಹಣೆ, ಟೀಮ್ ವರ್ಕ್, ಸಮಯ ನಿರ್ವಹಣೆ ಮುಂತಾದವುಗಳು ನನ್ನ ವೃತ್ತಿ ಜೀವನದಲ್ಲಿ ತುಂಬಾ ಸಹಕಾರಿಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್.ಶೆಣೈ ಮಾತನಾಡಿ ವಿದ್ಯಾರ್ಥಿಗಳು ತಾವೇನಾಗಬೇಕೆಂದು ನಿರ್ಧರಿಸಿ ಅದಕ್ಕೆ ತಕ್ಕುದಾದ ಅಡಿಪಾಯವನ್ನು ಗಟ್ಟಿಗೊಳಿಸಬೇಕು ಎಂದರು. ಇಂಜಿನಿಯರ್ ಆದವ ನಿಜವಾದ ಸಮಸ್ಯೆಗಳನ್ನು ಪರಿಹರಿಸಬಲ್ಲವನಾಗಿರುತ್ತಾನೆ ಇದಕ್ಕಾಗಿ ಅಪಾರ ಅನುಭವದ ಅಗತ್ಯವಿದೆ, ಅದನ್ನು ಗಳಿಸಿಕೊಳ್ಳುವಲ್ಲಿ ನಿಮ್ಮ ಜಾಣತನವನ್ನು ಬಳಸಿಕೊಳ್ಳಿ ಎಂದರು.
ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಮೂರನೇ ರ್ಯಾಂಕ್ ಗಳಿಸಿದ ಕೇಶವ ಪ್ರಜ್ವಲ್, ಐದನೇ ರ್ಯಾಂಕ್ ಗಳಿಸಿದ ಕೆ.ಪಲ್ಲವಿ ಹಾಗೂ ಎಂಬಿಎ ವಿಭಾಗದಲ್ಲಿ ಐದನೇ ರ್ಯಾಂಕ್ ಗಳಿಸಿದ ಸ್ನೇಹಾ ಪೈ.ಕೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರತಿ ವಿಭಾಗದಲ್ಲಿ ಶೈಕ್ಷಣಿಕ ಸಾಧನೆಯನ್ನು ಮಾಡಿದ, ದತ್ತಿ ನಿಧಿ ಪ್ರಶಸ್ತಿಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಾಹಿತ್ಯಿಕ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಚಾಂಪಿಯನ್ ಆದ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಬಲರಾಮ ಆಚಾರ್ಯ.ಜಿ.ಎಲ್, ಇಂಜ್ನಿಯರಿಂಗ್ ಕಾಲೇಜು ಆಡಳಿತ ಮಂಡಲಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಕೋಶಾಧಿಕಾರಿ ಮುರಳೀಧರ ಭಟ್, ನಿರ್ದೇಶಕರಾದ ರವಿಕೃಷ್ಣ.ಡಿ.ಕಲ್ಲಾಜೆ, ಸತ್ಯನಾರಾಯಣ ಭಟ್, ಸಂತೋಷ್ ಕುತ್ತಮೊಟ್ಟೆ, ಡಾ.ಯಶೋಧಾ ರಾಮಚಂದ್ರ, ಕಾರ್ಯಕ್ರಮ ಸಂಯೋಜಕ ಡಾ.ಚೇತನ್.ಪಿ.ಡಿ ಮತ್ತು ವಿದ್ಯಾರ್ಥಿ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಸ್ಕಂದಶ್ಯಾಮ ಅತಿಥಿಗಳನ್ನು ಪರಿಚಯಿಸಿದರು. ಶಿವಾನಿ ಸ್ವಾಗತಿಸಿ, ತಾಶ್ವಿ ರೈ ವಂದಿಸಿದರು. ತಾರಿಣಿ ಹಾಗೂ ಶ್ರೀನಿವಾಸ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.

navarang 2025 (3)

navarang 2025 (4)

navarang 2025 (1)

Sponsors

Related Articles

Back to top button