ಬಾಲವನ ವಿಚಾರಗೋಷ್ಠಿ:ಕಾರಂತರ ಬರಹದಲ್ಲಿ ನಿಜದ ನೆಲೆಯ ಕಲ್ಪನೆಯಿದೆ – ಡಾ. ತಾಳ್ತಜೆ….
ಪುತ್ತೂರು: ಡಾ.ಶಿವರಾಮ ಕಾರಂತರು ಪರಿಸರವನ್ನು ಅನುಭವಿಸಿ ಬರೆದವರಾಗಿದ್ದು, ಅವರ ಬರಹದಲ್ಲಿ ನಿಜದ ನೆಲೆಯ ಕಲ್ಪನೆಯಿದೆ ಎಂದು ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ್ ಹೇಳಿದರು.
ಅವರು ಗುರುವಾರ ಪುತ್ತೂರಿನ ಬಾಲವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ.ಶಿವರಾಮ ಕಾರಂತರ ಬಾಲವನ ಪರ್ಲಡ್ಕ, ಸಹಾಯಕ ಆಯುಕ್ತರ ಕಚೇರಿ ಪುತ್ತೂರು ಇವುಗಳ ಸಹಯೋಗದಲ್ಲಿ ನಡೆದ ಡಾ. ಶಿವರಾಮ ಕಾರಂತರ 118ನೇ ಜನ್ಮ ದಿನೋತ್ಸವದಲ್ಲಿ `ಡಾ.ಶಿವರಾಮ ಕಾರಂತರು ಮತ್ತು ಪರಿಸರ’ ವಿಚಾರದ ಬಗ್ಗೆ ಉಪನ್ಯಾಸ ನೀಡಿದರು.
ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದ ಕಾರಂತರು ಒಬ್ಬ ಪರಿವ್ರಾಜಕರು. ನಿಜದ ನೆಲೆಯನ್ನೇ ಅವರು ಬರೆಯುತ್ತಿದ್ದರು. ಪರಿಸರವನ್ನು ತತ್ವಶಾಸ್ತ್ರೀಯವಾಗಿ ನೋಡುವುದಕ್ಕೂ, ಪ್ರಾಯೋಗಿಕವಾಗಿ ನೋಡುವುದಕ್ಕೂ ವ್ಯತ್ಯಾಸವಿದೆ. ಎರಡನೇ ವರ್ಗಕ್ಕೆ ಸೇರಿದವರು ಕಾರಂತರು. ಹಂಪಿಯ ಬೆಟ್ಟದಲ್ಲಿ ಭಗ್ನ ನರಸಿಂಹನ ಮೂರ್ತಿಗೆ ಕಾಂಕ್ರೀಟ್ ಕೈ ತೊಡಿಸಲು ಸರಕಾರ ಮುಂದಾದಾಗ ಅದರ ವಿರುದ್ಧ ಅಂದಿನ ಪ್ರಧಾನಿ ರಾಜೀವ್ ಗಾಂಧಿಗೆ ಪತ್ರ ಬರೆದು ಪ್ರತಿಭಟಿಸಿದ್ದರು. ಇದಕ್ಕೆ ಮಣಿದ ಸರಕಾರ ತನ್ನ ಯೋಜನೆ ಕೈ ಬಿಟ್ಟಿತ್ತು. ಕಾರಂತರು ಮೂಲ ಸತ್ವವನ್ನು ಪ್ರೀತಿಸುತ್ತಿದ್ದ ಬಗೆ ಇದು. ಭೇಡ್ತಿ, ಅಘನಾಶಿನಿ ಉಳಿವಿಗಾಗಿ ಅವರು ಮಾಡಿದ ಹೋರಾಟ ಅವಿಸ್ಮರಣೀಯ ಎಂದರು.
ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಡಾ. ವಿಜಯ ಮೊಳೆಯಾರ್ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ, ವಂದಿಸಿದರು.