ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಅವರಿಗೆ ರಾಜ್ಯ ಮಟ್ಟದ ‘ಪತ್ರಕರ್ತ ಸೌರಭ’ ಪ್ರಶಸ್ತಿ…

ಬಂಟ್ವಾಳ: ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಇವರು ಕೊಡಮಾಡುವ ರಾಜ್ಯ ಮಟ್ಟದ ಪತ್ರಕರ್ತ ಸೌರಭ ಪ್ರಶಸ್ತಿ 2023 ಪ್ರಶಸ್ತಿಗೆ ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಆಯ್ಕೆಯಾಗಿರುತ್ತಾರೆಂದು ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧು ನಾಯ್ಕ್ ಹೂವಿನಹಡಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.26ರಂದು ವಿಜಯಪುರದ ಹಂಪಿಯಲ್ಲಿ ನಡೆಯುವ ರಾಜ್ಯ ಸಮ್ಮೇಳನ ಮತ್ತು ಸಾವಿರ ಗೋಷ್ಠಿಯ ಸಂಭ್ರಮ ಕಾಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಘಟಕದ ಸಹಯೋಗದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕಾರ ನಡೆಯಲಿದೆ.
ಕರ್ನಾಟಕ ರಾಜ್ಯದ ಪ್ರಮುಖ ದಿನ ಪತ್ರಿಕೆಗಳಲ್ಲಿ ಕಳೆದ 35 ವರ್ಷಗಳಿಂದ ಬಂಟ್ವಾಳ ತಾಲೂಕಿನಲ್ಲಿ ಪತ್ರಿಕಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಜಯಾನಂದ ಪೆರಾಜೆಯವರು ಪತ್ರಕರ್ತರಾಗಿ ಚಿರಪರಿಚಿತರು. 1986 ರಲ್ಲಿ ಸುದ್ದಿ ಬಿಡುಗಡೆ ವಾರ ಪತ್ರಿಕೆ ಬಂಟ್ವಾಳದಲ್ಲಿ ವರದಿಗಾರರಾಗಿ ಪತ್ರಿಕಾರಂಗಕ್ಕೆ ಪ್ರವೇಶಿದ ಇವರು 1987 ರಲ್ಲಿ ಹೊಸದಿಗಂತ ದಿನ ಪತ್ರಿಕೆಯ ತಾಲೂಕು ವದಿಗಾರರಾಗಿ ಪತ್ರಿಕಾ ಕ್ಷೇತ್ರದಲ್ಲಿ ಅಸ್ತಿತ್ವ ಕಂಡುಕೊಂಡರು. 1993 ರಲ್ಲಿ ಮುಂಗಾರು ದಿನ ಪತ್ರಿಕೆಯಲ್ಲಿ ಮೂರು ವರ್ಷ , 1996 ರಿಂದ ಸಂಯುಕ್ತ ಕರ್ನಾಟಕ ದೈನಿಕದಲ್ಲಿ 5 ವರ್ಷ ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸಿದರು . 2000 ದಿಂದ 2009 ರವರೆಗೆ ಕನ್ನಡ ಪ್ರಭ ದಿನಪತ್ರಿಕೆಗಳಲ್ಲಿ 10 ವರ್ಷ ಕಾರ್ಯನಿರ್ವಹಿಸಿದರು. ಬಳಿಕ ಹೊಸದಿಗಂತ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆಯನ್ನು ಮುಂದುವರಿಸಿದಾರೆ.
ಬಂಟ್ವಾಳದಲ್ಲಿ ಆರಂಭವಾದ ನಮ್ಮ ಬಂಟ್ವಾಳ ಪತ್ರಿಕೆಯ ಉಪಸಂಪಾದಕರಾಗಿ, ಜನ ಈ ದಿನ, ನೇತ್ರಾವತಿ ವಾರ್ತೆ ಪತ್ರಿಕೆಗಳಲ್ಲಿ ಸಕ್ರಿಯವಾಗಿದ್ದರು. ವಂಶ, ನವ್ಯವಾಣಿ ವಾರಪತ್ರಿಕೆಗಳಲ್ಲಿ ಲೇಖನ ಕವನ ಬರಹಗಳನ್ನು ಪ್ರಕಟಿಸಿ ಕವಿ ಸಾಹಿತಿಯಾಗಿ ಗುರುತಿಸಲ್ಪಟ್ಟಿದ್ದಾರೆ.
ದ.ಕ. ಜಿಲ್ಲಾ ಬರಹಗಾರರ ಸಂಘದ ಅಧ್ಯಕ್ಷರು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ದ.ಕ. ಜಿಲ್ಲಾಧ್ಯಕ್ಷರು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ ಸಾಹಿತ್ಯ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ.
ಜೆ.ಸಿ.ಐ ಸಂಸ್ಥೆಯ ಉದಕ ಪತ್ರಿಕೆಯ ಸಂಪಾದಕರಾಗಿ, ನೇತ್ರಾವತಿ ಜೋಡುಮಾರ್ಗ , ಸರಯು ಪತ್ರಿಕೆ ಹಾಗೂ ಹಲವು ಸ್ಮರಣ ಸಂಚಿಕೆಗಳಲ್ಲಿ ಸಂಪಾದಕರಾಗಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಜೆಸಿಐ ಜೋಡುಮಾರ್ಗ ನೇತ್ರಾವತಿ ಜ್ಯೂನಿಯರ್ ಚೇಂಬರ್ ನ ಅಧ್ಯಕ್ಷರಾಗಿದ್ದರು. ಜೆಸಿಐ ರಾಜ್ಯ ತರಬೇತುದಾರರಾಗಿ , ರಾಷ್ಟೀಯ ತೀರ್ಪುಗಾರರಾಗಿ ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ ಹಲವು ಸಾಧನಾ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಕನ್ನಡ ರತ್ನ, ಚೈತನ್ಯ ಶ್ರೀ, ಪತ್ರಿಕಾ ರಂಗದ ಭೀಷ್ಮ ಮೊದಲಾದ ಗೌರವ ಪ್ರಶಸ್ತಿಗಳು ಇವರಿಗೆ ದೊರಕಿವೆ.

Sponsors

Related Articles

Back to top button