`ದೃಷ್ಠಿ’ ರಾಜ್ಯಮಟ್ಟದ ಕಾರ್ಯಾಗಾರ ಸಮಾರೋಪ….
ಪುತ್ತೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಎಂಬ ವ್ಯವಸ್ಥೆಯಿದೆ. ಈ ಎಲ್ಲದಕ್ಕೂ ವ್ಯಕ್ತಿ ಮುಖ್ಯವಾಗುತ್ತಾನೆ. ಹಾಗಾಗಿ ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಪ್ರಾಥಮಿಕವಾಗಿ ಸಾಮಾಜಿಕ ಬದ್ಧತೆ, ದೇಶ ಸೇವೆಯನ್ನು ಮೈಗೂಡಿಸಿಕೊಳ್ಳಬೇಕು. ಆಗ ಈ ಆಡಳಿತ ವ್ಯವಸ್ಥೆ ಬಲಿಷ್ಟವಾಗಿ, ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಕಾರ್ಯವಾಹ ಮುಕುಂದ ಸಿ.ಆರ್. ಹೇಳಿದರು.
ಅವರು ಸೋಮವಾರ ಸಂಜೆ ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಶಸ್ ಅಧ್ಯಯನ ಕೇಂದ್ರದಿಂದ ಆಯೋಜಿಸಲಾದ ಐಎಎಸ್, ಕೆಎಎಸ್ ತರಬೇತಿ ಅಕಾಡೆಮಿ ಹಾಗೂ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ದೃಷ್ಠಿ ರಾಜ್ಯಮಟ್ಟದ ಕಾರ್ಯಾಗಾರದ ಸಮಾರೋಪದಲ್ಲಿ ಸಮಾರೋಪ ಮಾತುಗಳನ್ನಾಡಿದರು.
ಬುದ್ಧಿ, ವಿದ್ಯೆಯ ಜೊತೆಗೆ ಸಾಮಾಜಿಕ ಪ್ರೇಮ, ಕಾಳಜಿಯನ್ನು ಹುಟ್ಟುಹಾಕುವ ಕೆಲಸವನ್ನು ಮಾಡಬೇಕಿದೆ. ಅದಕ್ಕೆ ಪೂರಕವೆಂಬಂತೆ ಯಶಸ್ ಸಂಸ್ಥೆಯಂತಹ ಚಿಂತನೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳಲ್ಲಿ ರೂಪಿಸಿದಾಗ ವ್ಯಕ್ತಿತ್ವದ ನಿರ್ಮಾಣವಾಗುತ್ತದೆ. ಸಮಾಜದ ಕುರಿತು ತಿಳಿಸುವ ಹಾಗೂ ಆಡಳಿತ ವ್ಯವಸ್ಥೆಗೆ ಹೋಗುವ ಮೊದಲು ನೀಡಬೇಕಾದ ಶಿಕ್ಷಣದ ಪ್ರಕ್ರಿಯೆಯಿಂದ ಮುಂದೆ ಉತ್ತಮ ವ್ಯಕ್ತಿಗಳು ಈ ಆಡಳಿತವನ್ನು ನಡೆಸಬಹುದು. ಇದರಿಂದ ಪರಿಶ್ರಮ, ಜ್ಞಾನ, ಮಾಹಿತಿಯ ದೃಷ್ಟಿಯಿಂದ ಸಾಮಾಜಿಕ ಬದ್ಧತೆಯ ಮೂಲಕ ಮೌಲ್ಯಗಳನ್ನು ನೀಡುವ ವ್ಯಕ್ತಿಗಳನ್ನು ನೀಡಬಹುದು ಎಂದರು.
ಭಾರತ ಸರಕಾರದ ನಿವೃತ್ತ ಕಾರ್ಯದರ್ಶಿ ವಿ.ವಿ.ಭಟ್ ಮಾತನಾಡಿ, ಉತ್ತಮ ವ್ಯಕ್ತಿತ್ವವಿರುವ ವ್ಯಕ್ತಿಗಳು ಸರಕಾರಿ ಕೆಲಸದಲ್ಲಿರಬೇಕು ಎಂಬ ಉದ್ದೇಶದಿಂದ ಇಂತಹ ಸಂಸ್ಥೆಯನ್ನು ಆರಂಭಿಸಲಾಗಿದೆ. ಮಾತ್ರವಲ್ಲದೆ ಸರಕಾರಿ ವ್ಯವಸ್ಥೆಯಲ್ಲಿ ಯಾಂತ್ರಿಕವಾಗಿ ಬದಲಾವಣೆ ಮಾತ್ರವಲ್ಲದೆ ಚಾರಿತ್ರ್ಯವಂತ, ಚಿಂತನೆಯ ವ್ಯಕ್ತಿಗಳು ಈ ಕೆಲಸಕ್ಕೆ ಬರುವ ಮೂಲಕ ಬದಲಾವಣೆ ಆಗಬೇಕು ಎಂಬ ದೃಷ್ಟಿಯಿಂದ ಸಾಂಘಿಕವಾಗಿ ಪ್ರಯತ್ನಗಳಾಗಬೇಕು ಎಂದು ತಿಳಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ. ಕೃಷ್ಣಭಟ್, ಯಶಸ್ ಸಂಸ್ಥೆಯ ಅಧ್ಯಕ್ಷ ಕೃಷ್ಣ ನಾರಾಯಣ ಮುಳಿಯ ಉಪಸ್ಥಿತರಿದ್ದರು.
ಯಶಸ್ ಸಂಸ್ಥೆಯ ಕಾರ್ಯದರ್ಶಿ ಮುರಳೀಕೃಷ್ಣ ಕೆ.ಎನ್. ಸ್ವಾಗತಿಸಿದರು. ಯಶಸ್ ಸಂಸ್ಥೆಯ ಸಂಯೋಜಕ ಗೋವಿಂದರಾಜ ಶರ್ಮ ಕೆ.ಎಂ. ವಂದಿಸಿದರು. ಉಪನ್ಯಾಸಕಿ ವಿದ್ಯಾ ಎಸ್. ಕಾರ್ಯಕ್ರಮ ನಿರೂಪಿಸಿದರು.