ಜಿಲ್ಲಾಮಟ್ಟದ ರೋವರ್ಸ್ ರೇಂಜರ್ಸ್ ಶಿಬಿರದ ಸಮಾರೋಪ….
ಪುತ್ತೂರು: ವಿಪತ್ತು ಇಂದು ಎಲ್ಲರ ಮನೆಯ ಬಾಗಿಲು ತಟ್ಟುತ್ತಿದೆ. ಆದ್ದರಿಂದ ಇಂದು ಆಚರಣೆಗಳಿಗೆ ಸಜ್ಜಾಗುವುದಕ್ಕಿಂತ, ವಿಪತ್ತನ್ನು ಎದುರಿಸಲು ತಯಾರಾಗುವ ಅಗತ್ಯವಿದೆ. ಆದರೆ ಮತ್ತೊಬ್ಬರನ್ನು ಕಾಪಾಡುವ ಮುನ್ನ ನಾವು ನಿಂತಿರುವ ನೆಲ ಗಟ್ಟಿಯಾಗಿದೆಯೆ ಎಂದು ಆಲೋಚಿಸಿ ಮುನ್ನುಗ್ಗಬೇಕು. ಇಲ್ಲವಾದರೆ ಅದು ಇನ್ನೊಂದು ಅನಾಹುತಕ್ಕೆ ದಾರಿಯಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಎಚ್. ಮಾಧವ ಭಟ್ ಹೇಳಿದರು.
ಅವರು ಭಾನುವಾರ ಇಲ್ಲಿನ ವಿವೇಕಾನಂದ ಕಾಲೇಜು, ಕರ್ನಾಟಕದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ದಕ್ಷಿಣಕನ್ನಡದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ 3ದಿನದ ಜಿಲ್ಲಾ ಮಟ್ಟದ ರೋವರ್ಸ್ ರೇಂಜರ್ಸ್ ವಿಪತ್ತು ನಿರ್ವಹಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಎಂ.ಜಿ.ಕಜೆ ಮಾತನಾಡಿ, ವಿಪತ್ತು ಹೇಗೆ ಯಾವ ಸಮಯದಲ್ಲಿ ಬರುತ್ತದೆ ಎಂದು ಯಾರಿಗು ತಿಳಿದಿರುವುದಿಲ್ಲ. ಹಾಗಾಗಿ ಬರುವ ತೊಂದರೆಗೆ ಸಜ್ಜಾಗಿರುವುದು ತುಂಬಾ ಅವಶ್ಯಕ. ಹಾಗೆಯೇ ರಾಷ್ಟ್ರಗೀತೆಯ ಒಳ ಅರ್ಥವನ್ನು ಅರಿತು ಸೇವೆಯಲ್ಲಿ ನಮ್ಮನ್ನು ನಾವೂ ತೊಡಗಿಸಿಕೊಳ್ಳಬೇಕು. ಯಾವುದೇ ಘಟಕಗಳು ಪರೀಕ್ಷೆ ಅಥವಾ ಪ್ರಮಾಣ ಪತ್ರವನ್ನು ನೀಡುವುದಕ್ಕಾಗಿ ಪ್ರಾರಂಭವಾದುದಲ್ಲ. ಸೇವೆಯ ಮನೋಭಾವ ಯುವಜನತೆಯಲ್ಲಿ ಬೆಳಸುವ ನಿಟ್ಟಿನಲ್ಲಿ. ಆ ಧ್ಯೇಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನವರ ಮೇಲಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಧರ್ಮ, ಕರ್ಮ ಎರಡು ಸೇವೆಯೇ. ಕರುಣೆ ಇತರರ ಮೇಲೆ ಇದ್ದಾಗ ಮಾತ್ರ ಸೇವಾ ಮನೋಭಾವ ಪರಿಪೂರ್ಣವಾಗುತ್ತದೆ. ದಯಾಭಾವ ಯಾರಲ್ಲಿ ಇಲ್ಲವೋ ಅವರು ಎಷ್ಟೇ ತರಬೇತಿ ಪಡೆದರೂ ಅದು ವ್ಯರ್ಥ. ಪರರಿಗೆ ಸಹಾಯ ಮಾಡಿ ಸಂತಸ ಕಾಣುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಪುತ್ತೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ಅಧ್ಯಕ್ಷ ರೆ. ವಿಜಯ ಹಾರ್ವಿನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇವಾ ಮನೋಭಾವ ಬೆಳೆಯಬೇಕು ಎಂದರೆ ಮಾನವೀಯತೆಯ ಭಾವ ಇರಬೇಕು. ಇಂದಿನ ಮಾನವ ಸಂಪನ್ಮೂಲಗಳನ್ನು ಮುಂಬರುವ ಯಾವದೇ ವಿಪತ್ತಿಗೂ ಸಜ್ಜಾಗಬೇಕಾದ ಅವಶ್ಯಕತೆಯಿದೆ. ಅಂತೆಯೇ ಮನುಜ ಶಿಸ್ತು, ಸೇವೆ, ಸಂಯಮವನ್ನು ಮೈಗೂಡಿಸಿಕೊಂಡು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಶಿಬಿರದ ನಾಯಕ ಈಶ್ವರ ಪ್ರಸಾದ್ ಕೆ.ಎಸ್. ಸ್ವಾಗತಿಸಿದರು. ದಕ್ಷಿಣಕನ್ನಡ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಘಟಕ ಭರತ್ ವಂದಿಸಿದರು. ಶಿಬಿರಾರ್ಥಿ ಶಹನ ಮುಂತಾಸ್ ಮತ್ತು ಗೌತಮಿ ಕಾರ್ಯಕ್ರಮ ನಿರೂಪಿಸಿದರು.