ಮಂಗಳೂರು ವಿವಿ ಅಂತರ್ ವಲಯ ಫುಟ್‍ಬಾಲ್ ಪಂದ್ಯಾಟ……
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಆತಿಥ್ಯದಲ್ಲಿ ಫಿಲೋಮಿನಾ ಕ್ರೀಡಾಂಗಣದಲ್ಲಿ 4 ದಿನಗಳ ಕಾಲ ನಡೆದ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಮಂಗಳೂರು ವಲಯ ಮತ್ತು ಅಂತರ್ ವಲಯ ಪುರುಷರ ಫುಟ್ ಬಾಲ್ ಪಂದ್ಯಾಟದಲ್ಲಿ ಸಮಗ್ರ ಚಾಂಪಿಯನ್ ಆಗಿ ಮೂಡಿ ಬಂದ ಉಳ್ಳಾಲದ ಮೆರೀಡಿಯನ್ ಕಾಲೇಜು ತಂಡ `ಬಿ. ಸದಾನಂದ ಮತ್ತು ವಾಮನ’ ಸ್ಮರಣಾರ್ಥ ರೋಲಿಂಗ್ ಟ್ರೋಫಿಯನ್ನು ಪಡೆದುಕೊಂಡಿತು.
ಮಂಗಳೂರು ವಲಯ ಮಟ್ಟದ ಪಂದ್ಯಾಟದಲ್ಲಿ ಚಾಪಿಯನ್‍ಶಿಪ್ ಪ್ರಶಸ್ತಿಯನ್ನು ಮೆರೀಡಿಯನ್ ಕಾಲೇಜು, ದ್ವಿತಿಯ ಪ್ರಶಸ್ತಿಯನ್ನು ಸಂತ ಅಲೋಶಿಯಸ್ ಕಾಲೇಜು, ತೃತೀಯ ಪ್ರಶಸ್ತಿಯನ್ನು ಪಿಎ ಪ್ರಥಮ ದರ್ಜೆ ಕಾಲೇಜು ಮತ್ತು ಚತುರ್ಥ ಪ್ರಶಸ್ತಿಯನ್ನು ಸಂತ ಫಿಲೋಮಿನಾ ಕಾಲೇಜು ತಂಡಗಳು ಪಡೆದುಕೊಂಡಿದೆ. ಈ ಪಂದ್ಯಾಟದ ಉತ್ತಮ ಆಟಗಾರನಾಗಿ ಸಂತ ಅಲೋಶಿಯಸ್ ಕಾಲೇಜಿನ ತಂಡದ ಸಹಲ್, ಉತ್ತಮ ಗೋಲ್ ಕೀಪರ್ ಆಗಿ ಪಿಎ ಪ್ರಥಮ ದರ್ಜೆ ಕಾಲೇಜು ತಂಡದ ಶುಹೈಬ್, ಉತ್ತಮ ಡಿಫೆಂಡರ್ ಆಗಿ ಸಂತ ಫಿಲೋಮಿನಾ ಕಾಲೇಜಿನ ಶರತ್ ಮೂಡಿ ಬಂದಿದ್ದಾರೆ.
ಸಮಾರೋಪ ಸಮಾರಂಭ:
ಈ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಪುತ್ತೂರಿನ ಎಸ್ ಜಿ ಕಾರ್ಪೊರೇಟ್ಸ್ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ರಂಜಿತಾ ಶಂಕರ್ ಅವರು ಮಾತನಾಡಿ, ಕ್ರೀಡೆಯಲ್ಲಿ ಅದ್ಭುತ ಶಕ್ತಿ ಅಡಗಿದೆ. ಕ್ರೀಡೆಯಲ್ಲಿ ಗೆದ್ದವರು ಮಾತ್ರ ಪ್ರತಿಭಾವಂತರಲ್ಲ, ಪ್ರತಿಯೊಬ್ಬ ಆಟಗಾರನಲ್ಲೂ ವಿಶೇಷ ಪ್ರತಿಭೆ ಅಡಗಿದೆ. ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತವಾಗಿರದೆ, ಎಲ್ಲಾ ಚಟುವಟಿಕೆಗಳಲ್ಲಿಯೂ ನಿರಂತರ ಭಾಗವಹಿಸುವ ಮನೋಸ್ಥಿತಿ ಹೊಂದಿರಬೇಕು ಎಂದರು.
ಪುತ್ತೂರು ತಾ.ಪಂ. ಅಧ್ಯಕ್ಷ ಕೆ ರಾಧಾಕೃಷ್ಣ ಬೋರ್ಕರ್,
ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೆಶಕ ಡಾ. ಜೆರಾಲ್ಡ್ ಸಂತೋಷ್ ಡಿ’ಸೋಜ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಲಿಯೋ ನೊರೊನ್ಹಾ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಮಂಗಳೂರು ವಿವಿಯ ಫುಟ್ ಬಾಲ್ ತಂಡದ ಮಾಜಿ ಕ್ಯಾಫ್ಟನ್‍ಗಳಾದ ದಿವ್ಯದರ್ಶನ್ ವೈ ಎಮ್ ಮತ್ತು ಪ್ರೇಮನಾಥ ಎಚ್ ಕೆ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ವ್ಯವಹಾರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿ’ಸೋಜ ವಂದಿಸಿದರು.
ನಾಲ್ಕು ದಿನಗಳ ಕಾಲ ನಡೆದ ಈ ಪಂದ್ಯಾಟಗಳಲ್ಲಿ ತೀರ್ಪುಗಾರರಾಗಿ ಅಖಿಲ್ ಕೃಷ್ಣ, ದರ್ಶನ್ ಸುಕುಮಾರ್, ತನ್ವೀರ್ ಅಹಮ್ಮದ್, ಇಬ್ರಾಹಿಮ್ ಎಮ್, ಶಿರಾಜ್, ನವೀದ್, ಗಣೇಶ್, ನಝೀರ್, ಪುನೀತ್ ಗಾಂಧಿ ಮತ್ತು ಶಿವ ಕುಮಾರ್ ಸಹಕರಿಸಿದ್ದರು.