`ಮೀಡಿಯಾ @ ವಿಲೇಜ್’ ಅಭಿಯಾನ….
ಪುತ್ತೂರು: ಓರ್ವ ವ್ಯಕ್ತಿ ಉತ್ತಮ ಪತ್ರಕರ್ತರಾಗಲು ಆತನ ಪತ್ರಿಕೋದ್ಯಮ ಪದವಿ, ಸ್ನಾತಕ್ಕೋತ್ತರ ಪದವಿಗಿಂದ ಲೋಕ ವಿಶ್ವವಿದ್ಯಾನಿಲಯದಲ್ಲಿ ಕಲಿಯುವ ಪಾಠವೇ ಮುಖ್ಯವಾಗಿದ್ದು, ಆತನನ್ನು ಲೋಕವಿಶ್ವವಿದ್ಯಾನಿಲಯ ಉತ್ತಮ ಪತ್ರಕರ್ತರನ್ನಾಗಿ ನಿರೂಪಿಸುತ್ತದೆ ಎಂದು ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕರಾದ ಲೇಖಕ ಡಾ. ನರೇಂದ್ರ ರೈ ದೇರ್ಲ ಹೇಳಿದರು.
ಅವರು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಪುತ್ತೂರು ಜಿಡೆಕಲ್ಲಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‍ನ ಸಹಯೋಗದಲ್ಲಿ ಗುರುವಾರ ನಡೆದ `ಮೀಡಿಯಾ @ ವಿಲೇಜ್’ ಅಭಿಯಾನದ ಅಡಿಯಲ್ಲಿ ನಡೆದ `ಮಾಧ್ಯಮ-ಭಾಷೆ- ಬರವಣಿಗೆ’ ಎಂಬ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇವತ್ತು ನಮಗೆ ಭತ್ತ ಬೇಕು, ರೈತ ಬೇಡ, ಹಾಲು ಬೇಕು, ಹಸು ಬೇಡ ಎಂಬ ಮನೋಧರ್ಮವಿದೆ. ಗ್ರಾಮೀಣ ಮಣ್ಣಿನ ಮೂಲ ಸತ್ವ ಉಳಿಸುವ ಕೆಲಸ ಮಾಧ್ಯಮ ರಂಗ ಮಾಡಿದರೆ ಅದಕ್ಕಿಂತ ದೊಡ್ಡ ಸೇವೆ ಮತ್ತೊಂದಿಲ್ಲ ಎಂದು ಹೇಳಿದ ಅವರು, ಗ್ರಾಮೀಣ ನೆಲದಿಂದ ಬಂದ ವಿದ್ಯಾರ್ಥಿಗಳು ತಮ್ಮ ಮಣ್ಣಿನ ಆಯಾಮಗಳನ್ನು ಬರಹ ರೂಪಕ್ಕೆ ಇಳಿಸುವ ಕಲೆ ರೂಢಿಸಿಕೊಳ್ಳಬೇಕು. ವಸ್ತುವಿಗೆ ಹುಡುಕಾಡುವ ಅಗತ್ಯವಿಲ್ಲ. ಮಣ್ಣಿನ ಕಣದಿಂದ ಹಿಡಿದು ಪರ್ವತವರೆಗೂ ವಸ್ತುಗಳು ಸಿಗುತ್ತವೆ ಎಂದರು.
ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ನಳಿನಾಕ್ಷಿ ಎ.ಎಸ್. ಮಾತನಾಡಿ ವಿದ್ಯಾರ್ಥಿಗಳು ಬರೆಯುವುದನ್ನು ಕಲಿಯುವ ಮೊದಲು ಓದುವುದನ್ನು ಹವ್ಯಾಸ ಮಾಡಿಕೊಳ್ಳಬೇಕು. ಉತ್ತಮ ಭಾಷೆಯನ್ನು ಕರಗತ ಮಾಡಿಕೊಳ್ಳಬೇಕು. ಓದಿಸಿಕೊಂಡು ಹೋಗುವ ಬರಹ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದರು.
ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ ತಿಂಗಳಾಡಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸುಜಾತ ಎಂ.ಕೆ. ಶುಭ ಹಾರೈಸಿದರು.
ಪತ್ರಕರ್ತರಾದ ಮೇಘಾ ಪಾಲೆತ್ತಾಡಿ, ಸುಧಾಕರ ಸುವರ್ಣ ತಿಂಗಳಾಡಿ ಮತ್ತು ಸಂಶುದ್ದೀನ್ ಸಂಪ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರ ನಡೆಸಿಕೊಟ್ಟರು.
ಪತ್ರಕರ್ತರ ಸಂಘದ ಉಪಾಧ್ಯಕ್ಷ ಅನೀಶ್ ಕುಮಾರ್ ಮರೀಲ್ ಸ್ವಾಗತಿಸಿದರು. ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಅಂಬ್ರೋಸ್ ಎಂ.ಸಿ. ವಂದಿಸಿದರು. ಪತ್ರಕರ್ತರ ಸಂಘದ ಖಜಾಂಜಿ ಕೃಷ್ಣಪ್ರಸಾದ್ ಬಲ್ನಾಡು, ಮೆನೇಜರ್ ಪ್ರವೀಣ್ ಬೊಳುವಾರು, ಸದಸ್ಯರಾದ ಕುಮಾರ್ ಕಲ್ಲಾರೆ ಮತ್ತು ಹರೀಶ್ ಸಹಕರಿಸಿದರು.
ಕಾರ್ಯಾಗಾರದ ಕೊನೆಯಲ್ಲಿ ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ನಡುವೆ ಸಂವಾದ ಕಾರ್ಯಕ್ರಮ ನಡೆಯಿತು.