ಅಳಿಕೆ ಯಕ್ಷ ಸಹಾಯ ನಿಧಿ- ಕಲಾವಿದ ಜಯಾನಂದ ಸಂಪಾಜೆ ಆಯ್ಕೆ…
ಮಂಗಳೂರು: ಯಕ್ಷಗಾನ ರಂಗದ ಸರ್ವಾಂಗ ಸಾಧಕ,ರಾಜ್ಯ- ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮೇರುನಟ ದಿ.ಅಳಿಕೆ ರಾಮಯ್ಯ ರೈ ಅವರ ಹೆಸರಿನಲ್ಲಿ ಬೆಂಗಳೂರಿನ ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ನೀಡುವ ಅಳಿಕೆ ಯಕ್ಷ ಸಹಾಯ ನಿಧಿಗೆ 2020 – 22 ನೇ ಸಾಲಿನಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆ ಆಯ್ಕೆಯಾಗಿದ್ದಾರೆ.
ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ, ಮಾಜಿ ಅಕಾಡೆಮಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಕಲಾವಿದ ಉಮೇಶ ಶೆಟ್ಟಿ ಉಬರಡ್ಕ ಅವರನ್ನೊಳಗೊಂಡ ಸಲಹಾ ಸಮಿತಿಯ ತೀರ್ಮಾನದಂತೆ ಸಂತ್ರಸ್ತ ಕಲಾವಿದರಿಗೆ ಸಹಾಯ ನಿಧಿ ನೀಡಲಾಗುವುದೆಂದು ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾ ಪ್ರಸಾದ್ ರೈ ಹೇಳಿದ್ದಾರೆ. ಯಕ್ಷ ನಿಧಿಯು ರೂ. 20,000/- ನಗದು ಮತ್ತು ಗೌರವ ಫಲಕಗಗಳನ್ನೊಳಗೊಂಡಿದೆ.
ಮೇ.3ರಂದು ನಿಧಿಪ್ರದಾನ:
ಕಟೀಲು,ಕುಂಟಾರು, ಪುತ್ತೂರು, ಹೊಸನಗರ, ಎಡನೀರು, ಹನುಮಗಿರಿ, ಬಪ್ಪನಾಡು ಮುಂತಾದ ತೆಂಕುತಿಟ್ಟಿನ ಪ್ರಸಿದ್ಧ ಮೇಳಗಳಲ್ಲಿ 32ವರ್ಷ ತಿರುಗಾಟ ನಡೆಸಿದ ಜಯಾನಂದ ಸಂಪಾಜೆ ದೇವೇಂದ್ರ,ರಕ್ತಬೀಜ, ಇಂದ್ರಜಿತು , ಹಿರಣ್ಯಾಕ್ಷ ,ಅರುಣಾಸುರ,ಕರ್ಣ,ಅರ್ಜುನ, ಕೃಷ್ಣ,ವಿಷ್ಣು,ಈಶ್ವರ ಇತ್ಯಾದಿ ಧೀರೋದಾತ್ತ ಪಾತ್ರಗಳಿಗೆ ಹೆಸರಾಗಿದ್ದಾರೆ. ಇತ್ತೀಚೆಗೆ ಬಪ್ಪನಾಡು ಮೇಳದ ರಂಗಸ್ಥಳದಲ್ಲಿ ಪ್ರದರ್ಶನದ ನಡುವೆ ಕುಸಿದು ಕಾಲು ನೋವಿಗೆ ತುತ್ತಾದ ಅವರು ತಿರುಗಾಟ ಮುಂದುವರಿಸಲಾಗದೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೇ ಮೇ 3, 2022 ರಂದು ಮಂಗಳವಾರ ಸುಳ್ಯದ ಕಲ್ಲುಗುಂಡಿಯಲ್ಲಿರುವ ಜಯಾನಂದ ಸಂಪಾಜೆ ಅವರ ನಿವಾಸಕ್ಕೆ ತೆರಳಿ ಗೃಹ ಸನ್ಮಾನದೊಂದಿಗೆ ನಿಧಿ ಸಮರ್ಪಣೆ ಮಾಡಲಾಗುವುದು ಎಂದು ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾಪ್ರಸಾದ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.