ಮಂಗಳೂರು ದಸರಾ-ವೈಭವದ ಶೋಭಾಯಾತ್ರೆ….
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕಳೆದ 9 ದಿನಗಳಿಂದ ವೈಭವಯುತವಾಗಿ ನಡೆದ ನವರಾತ್ರಿ ಉತ್ಸವದ ಕೊನೆಯ ದಿನವಾದ ಅ.8 ರಂದು ಶಾರದೆ, ಗಣಪತಿ ಸೇರಿದಂತೆ ನವದುರ್ಗೆಯರ ವಿಗ್ರಹಗಳ ವೈಭವದ ಶೋಭಾಯಾತ್ರೆ ನಡೆಯಿತು.
ಮಂಗಳೂರು ದಸರಾ ಮಹೋತ್ಸವ ಮೆರವಣಿಗೆ ವರ್ಷದಿಂದ ವರ್ಷಕ್ಕೆ ವಿಶೇಷ ಆಕರ್ಷಣೆಯನ್ನು ಪಡೆಯುತ್ತಿರುವ ನಿಮಿತ್ತ ಸಾವಿರಾರು ಪ್ರವಾಸಿಗರು ಮಂಗಳೂರಿಗೆ ಆಗಮಿಸಿ, ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು.ಇದೇ ಮೊದಲ ಬಾರಿಗೆ ನವದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹಗಳು ಮೆರವಣಿಗೆಯ ಮೊದಲಿಗೆ ಸಾಗಿದ ಬಳಿಕ ಸ್ತಬ್ಧಚಿತ್ರಗಳು ಸಾಗಿದವು.ಶೋಭಾಯಾತ್ರೆಯಲ್ಲಿ ಹಲವು ಹುಲಿವೇಷದ ಟ್ಯಾಬ್ಲೋ, ನಾಸಿಕ್ ತಂಡ, ಕೇರಳ ಚೆಂಡೆ, ಬ್ರೆಜಿಲ್‌ನ ನೃತ್ಯದ ಟ್ಯಾಬ್ಲೋ, ಕುಂಭಕರ್ಣ ವಧೆ ಮಾಡುವ ಸನ್ನಿವೇಶ, ಹಳೆಯ ನಾಗರಿಕತೆಯನ್ನು ಬಿಂಬಿಸುವ ವಿಶಿಷ್ಟ ಟ್ಯಾಬ್ಲೋ, ಡ್ರ್ಯಾಗನ್, ಅಘೋರಿಗಳ ಟ್ಯಾಬ್ಲೋ, ವೀರಾಂಜನೇಯ ಟ್ಯಾಬ್ಲೋ ಗಮನಸೆಳೆಯಿತು.
ವರ್ಣರಂಜಿತ ಮಂಗಳೂರು ದಸರಾ ಮೆರವಣಿಗೆ ಕುದ್ರೋಳಿ ಕ್ಷೇತ್ರದಿಂದ ಆರಂಭಗೊಂಡು ಮಣ್ಣಗುಡ್ಡ, ಲೇಡಿಹಿಲ್, ಲಾಲ್‌ಭಾಗ್, ಎಂ.ಜಿ.ರಸ್ತೆ, ಕೆ.ಎಸ್.ರಾವ್ ರಸ್ತೆ, ವಿ.ವಿ.ಕಾಲೇಜು ವೃತ್ತದಿಂದ ಬಲಕ್ಕೆ ಜಿ.ಎಚ್.ಎಸ್.ರಸ್ತೆ, ರಥಬೀದಿ, ಅಳಕೆ ಮೂಲಕ ಸುಮಾರು 9 ಕಿ.ಮೀ. ಸಾಗಿ ಮತ್ತೆ ಕುದ್ರೋಳಿ ಕ್ಷೇತ್ರ ತಲುಪಿತು.