ಮಂಗಳೂರು ಗೋಲಿಬಾರ್‌-ನ್ಯಾಯಾಂಗ ತನಿಖೆಗೆ ಸಿದ್ಧರಾಮಯ್ಯ ಆಗ್ರಹ….

ಮಂಗಳೂರು: ಡಿ.19 ರಂದು ನಡೆದ ಗೋಲಿಬಾರ್‌ ಪ್ರಕರಣವನ್ನು ಸಿಐಡಿಗೆ ವಹಿಸಿರುವುದು ಸರಿಯಲ್ಲ, ನ್ಯಾಯಾಂಗ ತನಿಖೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಗೋಲಿಬಾರ್‌ ಮಾಡಿದವರು ಪೋಲಿಸರು, ಹಾಗೆಯೇ ಸಿಐಡಿಯಲ್ಲಿ ತನಿಖೆ ಮಾಡುವವರು ಪೊಲೀಸರೇ. ಆ ಕಾರಣದಿಂದಾಗಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದರು.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭಾನುವಾರ ಬೆಂಗಳೂರಿನ ಟೌನ್ ಹಾಲ್ ಮುಂದೆ ನಡೆದ ಜನಜಾಗೃತಿ ಕಾರ್ಯಕ್ರಮದಲ್ಲಿ “ಎದೆ ಸೀಳಿದರೆ ಎರಡಕ್ಷರ ಇಲ್ಲದಂತಹ, ಪಂಕ್ಚರ್ ಅಂಗಡಿ ಹಾಕಿಕೊಂಡಿರುವಂತವರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ” ಎಂಬ ಹೇಳಿಕೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತೇಜಸ್ವಿಯವರಿಗೆ ಬಡವರು ಮತ್ತು ದಲಿತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಬಡತನದಲ್ಲಿ ಕೂಲಿ ಮಾಡುವವರ ಬಗ್ಗೆ ಅವರಿಗೆ ತಿಳಿದಿಲ್ಲ. ಅವರು ಆರ್‌ಎಸ್‌ಎಸ್‌ನವರು ಅವರಿಂದ ನಾವು ಇನ್ನೇನು ಬಯಸಲು ಸಾಧ್ಯ ಎಂದಿದ್ದಾರೆ.
ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರ ಶಾಲೆಯಲ್ಲಿ ಬಾಬರಿ ಮಸೀದಿಯ ಪ್ರತಿ ದಹನ ಮಾಡಿದ ಕುರಿತ ಪ್ರಶ್ನೆಗೆ ಉತ್ತರಿಸಿ, ಪ್ರಭಾಕರ ಭಟ್‌ ಅವರು ಈ ಪ್ರದೇಶದ ಮುಖ್ಯಮಂತ್ರಿಯಿದ್ದಂತೆ. ಸರಕಾರವನ್ನು ಹತೋಟಿಯಲ್ಲಿ ಇಡುವವರು ಇವರು. ಅವರು ನೀಡಿದಂತಹ ಪ್ರಚೋದನಕಾರಿ ಭಾಷಣದಂತೆ ಬೇರೆ ಯಾರು ಭಾಷಣ ಮಾಡಿಲ್ಲ.ಅವರ ವಿರುದ್ಧ ದೂರು ದಾಖಲಾಗಬೇಕು. ಈಗಾಗಲೇ ಎಫ್‌ಐಆರ್‌ ಆಗಿದ್ದು ಅವರ ಬಂಧನ ಮಾಡಬೇಕು ಎಂದು ಹೇಳಿದ್ದಾರೆ.
ಆ ಬಳಿಕ ಸಿದ್ಧರಾಮಯ್ಯರವರು ಗುಂಡೇಟಿಗೆ ಬಲಿಯಾದವರ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿ ಅವರ ನೇತೃತ್ವದಲ್ಲಿ 5 ಲಕ್ಷ ರೂಪಾಯಿ ಹಾಗೂ ಜಿಲ್ಲಾ ಕಾಂಗ್ರೆಸ್‌ನಿಂದ 2.5 ಲಕ್ಷ ರೂಪಾಯಿಯ ಚೆಕ್‌ ವಿತರಣೆ ಮಾಡಿದರು. ಆಸ್ಪತ್ರೆಗೆ ಭೇಟಿ ನೀಡಿ, ಬಳಿಕ ಗೋಲಿಬಾರ್‌ ನಡೆದ ಸ್ಥಳಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಚಿವರಾದ ಬಿ ರಮನಾಥ ರೈ, ಯು.ಟಿ ಖಾದರ್‌, ಶಾಸಕರಾದ ಈವನ್‌ ಡಿಸೋಜ, ಹರೀಶ್‌ ಕುಮಾರ್‌, ಕಾರ್ಪೋರೇಟರ್‌ಗಳಾದ ಪ್ರವೀಣ್‌ ಚಂದ್ರ ಆಳ್ವ, ವಿನಯ ರಾಜ್‌, ಕಾಂಗ್ರೆಸ್‌ ಮುಖಂಡರಾದ ಮಿಥುನ್‌ ರೈ, ಜಿಎ ಬಾವ, ಲತೀಫ್‌ ಕಂದಕ್‌, ಡಿ ಎಂ ಅಸ್ಲಂ ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button