ದೆಹಲಿ ಚುಟುಕು ಸಾಹಿತ್ಯೋತ್ಸವ 2019 ….
ನವದೆಹಲಿ: ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿ ಬೆಳೆದಿದೆ. ಚುಟುಕು ಸಾಹಿತ್ಯ ಪ್ರಕಾರವು ಜನಪ್ರಿಯವಾಗುತ್ತಿದ್ದು ಸಂವೇದನಾಶೀಲ ಪದಗಳ ಬಳಕೆಯಿಂದ ಹೊಸತನವನ್ನು ರೂಡಿಸಿಕೊಳ್ಳಬೇಕು. ಮಾತನಾಡುವ ಭಾಷೆಗಿಂತ ಭಿನ್ನವಾದ ಸಂಕೇತ ಭಾಷೆ ,ಕವನ ಬರವಣಿಗೆಯಲ್ಲಿ ಕಾಣಬೇಕಾಗಿದೆ ಎಂದು ಹೊಸದಿಲ್ಲಿಯ ಜೆ.ಎನ್.ಯು. ವಿವಿಯ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಹಿರಿಯ ಸಾಹಿತಿ ಡಾ| ಪುರುಷೋತ್ತಮ ಬಿಳಿಮಲೆ ಹೇಳಿದರು.
ಅವರು ದೆಹಲಿ ಕರ್ನಾಟಕ ಸಂಘ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ದೆಹಲಿಯ ಕರ್ನಾಟಕ ಸಂಘ ಸಭಾಂಗಣದಲ್ಲಿ ಏರ್ಪಡಿಸಲಾದ ಅಂತಾರಾಜ್ಯ ಮಟ್ಟದ ಚುಟಕು ಕವನ , ದೇಶ ಪ್ರೇಮ , ಪರಿಸರ ಪ್ರೇಮ, ಯೋಗ ಜಾಗೃತಿ , ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ದ.ಕ ಜಿಲ್ಲಾ ಚು.ಸಾ.ಪ.ಅಧ್ಯಕ್ಷ ತಾರಾನಾಥ ಬೋಳಾರರ ನೇತೃತ್ವದಲ್ಲಿ ದೆಹಲಿಯಲ್ಲಿ ಪ್ರಥಮವಾಗಿ ಏರ್ಪಡಿಸಿದ ಚುಟುಕು ಸಾಹಿತ್ಯೋತ್ಸವ 2019 ಕಾರ್ಯಕ್ರಮವನ್ನು ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ| ವೆಂಕಟಾಚಲ ಜಿ. ಹೆಗ್ಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಡಾ| ಅವನೀಂದ್ರನಾಥ ರಾವ್, ಮಾಜಿ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ವೇದಮೂರ್ತಿ ಎಂ, ಜನಾರ್ಧನ ಭಟ್ ಮೊಗರ್ನಾಡು, ರಾಧಾಕೃಷ್ಣ ಕೆ. ಉಳಿಯತಡ್ಕ, ಉಪಸ್ಥಿತರಿದ್ದರು.
ಕರ್ನಾಟಕ ಸಂಘ ಪ್ರಧಾನ ಕಾರ್ಯದರ್ಶಿ ಸಿ.ಎಂ.ನಾಗರಾಜ ಸ್ವಾಗತಿಸಿದರು. ಚು.ಸಾ.ಪ. ಕಡಬ ವಲಯ ಗೌರವಾಧ್ಯಕ್ಷ ಜಯಾನಂದ ಪೆರಾಜೆ ಪ್ರಸ್ತಾವನೆಗೈದು ಆಶಯ ನುಡಿ ಹೇಳಿದರು. ಜಿಲ್ಲಾ ಕಾರ್ಯದರ್ಶಿ ಹ.ಸು. ಒಡ್ಡಂಬೆಟ್ಟು ವಂದಿಸಿದರು. ಸುರೇಖ ಯಳವಾರ ಬಂಟ್ವಾಳ ನಿರೂಪಿಸಿದರು.