ಅಳಿಕೆ ರಾಮಯ್ಯ ರೈ ಸಂಸ್ಮರಣೆ – ಸಹಾಯ ನಿಧಿ…
ಸಾರ್ಥಕತೆ ಕಂಡ ಅಳಿಕೆ ಸ್ಮೃತಿ ಗೌರವ - ಡಾ.ಪ್ರಭಾಕರ ಜೋಶಿ…

ಮಂಗಳೂರು: ‘ಒಂದು ಕಾಲಘಟ್ಟದಲ್ಲಿ ತನ್ನ ನಟನಾ ಕೌಶಲ್ಯ ಮತ್ತು ವಿಶಿಷ್ಟ ಹೆಜ್ಜೆಗಾರಿಕೆಯಿಂದ ತೆಂಕುತಿಟ್ಟು ಯಕ್ಷರಂಗವನ್ನು ಆಳಿದ ಅಳಿಕೆ ರಾಮಯ್ಯ ರೈ ಭವಿಷ್ಯದ ಕಲಾವಿದರಿಗೆ ಮಾದರಿಯಾಗಿದ್ದರು. ಅವರ ಹೆಸರಿನಲ್ಲಿ ಪ್ರತಿ ವರ್ಷ ನಿವೃತ್ತ ಯಕ್ಷಗಾನ ಕಲಾವಿದರ ಮನೆಗೆ ತೆರಳಿ ನೀಡುವ ಸಹಾಯ ನಿಧಿಯು ಒಂದು ಸಾರ್ಥಕ ಸ್ಮೃತಿ ಗೌರವವಾಗಿದೆ’ ಎಂದು ಹಿರಿಯ ಅರ್ಥಧಾರಿ, ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ಹೇಳಿದ್ದಾರೆ.
ಹಿರಿಯ ಯಕ್ಷಗಾನ ಕಲಾವಿದ ಬಿ.ಕೆ.ಚೆನ್ನಪ್ಪ ಗೌಡರ ನಿವಾಸದಲ್ಲಿ ಜರಗಿದ ದಿ.ಅಳಿಕೆ ರಾಮಯ್ಯ ರೈ ಸ್ಮೃತಿ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಸಂಸ್ಮರಣಾ ಭಾಷಣ ಮಾಡಿದರು.
ಬೆಂಗಳೂರಿನ ದಿ.ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ನೀಡಲಾಗುವ ರೂ. 20,000/- ಯಕ್ಷ ಸಹಾಯ ನಿಧಿಯನ್ನು 2022 – 23ನೇ ಸಾಲಿಗೆ ಇರಾ ಗ್ರಾಮದ ಕೆಂಜಿಲ ಪದವಿನಲ್ಲಿರುವ ಬಿ.ಕೆ.ಚೆನ್ನಪ್ಪ ಗೌಡರಿಗೆ ಗೃಹ ಸಂಮಾನದೊಂದಿಗೆ ಸಮರ್ಪಿಸಲಾಯಿತು. ಮುಂಬಯಿ ಉದ್ಯಮಿ,ಲೇಖಕ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಸನ್ಮಾನ ಪತ್ರ ವಾಚಿಸಿದರು.
ದಾಖಲೆಯ 70 ತಿರುಗಾಟ:
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯ ಹಾಗೂ ಸಲಹಾ ಸಮಿತಿ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಅಭಿನಂದನಾ ಭಾಷಣ ಮಾಡಿ ಮಾತನಾಡಿ ‘ಪ್ರಸ್ತುತ 92ರ ಹರೆಯದವರಾದ ಚೆನ್ನಪ್ಪ ಗೌಡರು ತೆಂಕು ಹಾಗೂ ಬಡಗು ತಿಟ್ಟಿನ ಒಟ್ಟು ಹನ್ನೊಂದು ಮೇಳಗಳಲ್ಲಿ 70 ತಿರುಗಾಟಗಳನ್ನು ಮಾಡಿ ದಾಖಲೆ ನಿರ್ಮಿಸಿದ್ದಾರೆ. ಯಕ್ಷಗಾನದ ಎಲ್ಲಾ ಬಗೆಯ ವೇಷಗಳನ್ನು ಶ್ರದ್ಧಾ ಪೂರ್ವಕವಾಗಿ ನಿರ್ವಹಿಸಿದ ಅವರೊಬ್ಬ ದಶಾವತಾರಿ’ ಎಂದರು.
ಧರ್ಮಸ್ಥಳ ಮೇಳದ ಹಿರಿಯ ಕಲಾವಿದ ಮತ್ತು ಸಲಹಾ ಸಮಿತಿ ಸದಸ್ಯ ಉಬರಡ್ಕ ಉಮೇಶ ಶೆಟ್ಟಿ ಸ್ವಾಗತಿಸಿದರು. ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾ ಪ್ರಸಾದ್ ರೈ ವಂದಿಸಿದರು. ಟ್ರಸ್ಟ್ ನಿರ್ದೇಶಕರಾದ ಮಹಾಬಲ ರೈ ಬಜನಿ ಗುತ್ತು ಮತ್ತು ಚೆನ್ನಪ್ಪ ಗೌಡರ ಪುತ್ರಿ ರಕ್ಷಿತಾ ಈ ಸಂದರ್ಭದಲ್ಲಿ ಉಪಸಿತರಿದ್ದರು.
