ಸಾಹಿತ್ಯವು ಜಡತ್ವವನ್ನು ದೂರ ಮಾಡುತ್ತದೆ : ಎಸ್ ಬಾಲಕೃಷ್ಣ ಕಾರಂತ್…
ಅಡ್ಯನಡ್ಕ : ” ಕೇವಲ ಪಠ್ಯಗಳು ಮಕ್ಕಳನ್ನು ಪರಿಪೂರ್ಣರನ್ನಾಗಿ ಮಾಡಲಾರವು. ಹೊಡೆತದಿಂದ ಎಚ್ಚರಿಸುವ ಬದಲು ಸಾಹಿತ್ಯದ ಮೂಲಕ ಮಕ್ಕಳನ್ನು ಜಾಗೃತಗೊಳಿಸಬೇಕು. ಸಾಹಿತ್ಯವು ಜಡತ್ವವನ್ನು ದೂರ ಮಾಡುತ್ತದೆ ” ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಬಂಟ್ಟಾಳ ತಾಲೂಕು ಘಟಕ ಗೌರವಾಧ್ಯಕ್ಷರಾದ ಎಸ್. ಬಾಲಕೃಷ್ಣ ಕಾರಂತ ಎರುಂಬು ಇವರು ಅಭಿಪ್ರಾಯಪಟ್ಟರು.
ಜನತಾ ಹಿರಿಯ ಪ್ರಾಥಮಿಕ ಶಾಲೆ ಅಡ್ಯನಡ್ಕದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಬಂಟ್ವಾಳ ಘಟಕದ ವತಿಯಿಂದ ಜರುಗಿದ ಸಾಹಿತ್ಯ ಸಂಭ್ರಮ – 2 ಮಕ್ಕಳ ಶಿಬಿರ ಉದ್ಘಾಟನೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭದ ಉದ್ಘಾಟನೆಯನ್ನು ಭಾಸ್ಕರ ಅಡ್ವಳ ನೆರವೇರಿಸಿದರು. ಮಕ್ಕಳಿಗೆ ವಿವಿಧ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಚುಟುಕು ಸಾಹಿತ್ಯ ರಚನೆಯ ತರಬೇತಿಯನ್ನು ಜಯಾನಂದ ಪೆರಾಜೆ ನಡೆಸಿಕೊಟ್ಟರು. ಭಾಸ್ಕರ ಅಡ್ವಳರು ಮಕ್ಕಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿದರು. ಸರ್ಕಾರಿ ಪ್ರೌಢ ಶಾಲೆ ಬೊಳಂತಿಕಮೊಗರಿನ ಶಿಕ್ಷಕರು ಮತ್ತು ಮಕ್ಕಳ ಸಾಹಿತ್ಯ ಪರಿಷತ್ತಿನ ವಿಟ್ಲ ವಲಯದ ಪ್ರತಿನಿಧಿ ಅನಿಲ್ ವಡಗೇರಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನತಾ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಮಾಧ್ಯಮ ವಿಭಾಗದ ಮುಖ್ಯೋಪಾಧ್ಯಾಯರಾದ ಹರಿಣಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು. ಜನತಾ ಹಿರಿಯ ಪ್ರಾಥಮಿಕ ಶಾಲೆಯ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯೋಪಾಧ್ಯಾಯರಾದ ಪ್ರಶಾಂತ್ ವಂದನಾರ್ಪಣೆಗೈದರು.
ಬಂಟ್ಟಾಳ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಕಲಾ ಕಾರಂತ್ ಉಪಸ್ಥಿತರಿದ್ದರು. ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ತರಬೇತಿಯ ಸದುಪಯೋಗ ಪಡೆದರು. ಮಕ್ಕಳ ಸಾಹಿತ್ಯ ಪರಿಷತ್ತಿನ ಬಂಟ್ವಾಳ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.