ಮಾಣಿಲ ಶ್ರೀಧಾಮ ಶ್ರೀ ದುರ್ಗಾಲಕ್ಷ್ಮೀ ಕ್ಷೇತ್ರ -ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯ ಬೆಳ್ಳಿ ಮಹೋತ್ಸವ…

ಬಂಟ್ವಾಳ:ವೃತಾಚರಣೆ ಮೂಲಕ ದೇವರ ಮೇಲಿನ ಭಕ್ತಿಯೊಂದಿಗೆ ಆಧ್ಯಾತ್ಮಿಕ ಚಿಂತನೆ ಬೆಳೆಯಬೇಕು. ಧಾರ್ಮಿಕ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡು ಜೀವನವನ್ನು ಪಾವನಗೊಳಿಸಬೇಕು. ತ್ಯಾಗ ಮತ್ತು ಸೇವೆಯಲ್ಲಿ ದೇವರನ್ನು ಕಾಣುವಂತಾಗಬೇಕು. ಎಲ್ಲರಿಗೂ ಒಳಿತನ್ನು ಮಾಡುವ ಕಾಯಕವು ನಿರಂತರವಾಗಿ ನಡೆಯಬೇಕು. ಹೊಟ್ಟೆಯ ಹಸಿವಿನ ಜೊತೆಗೆ ಅಧ್ಯಾತ್ಮದ ಹಸಿವು ಹೆಚ್ಚಾಗಬೇಕು. ಸಹಕಾರ , ಉಪಕಾರ ಸ್ಮರಣೆ, ಅನುಭೂತಿ ಪ್ರತಿಯೊಬ್ಬನಲ್ಲಿಯೂ ಇರಬೇಕು ಎಂದು ಮಾಣಿಲ ಶ್ರೀಧಾಮ ಶ್ರೀದುರ್ಗಾ ಮಹಾಲಕ್ಷ್ಮಿ ಕ್ಷೇತ್ರದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಮಾಣಿಲ ಶ್ರೀಧಾಮ ಶ್ರೀ ದುರ್ಗಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯ ಬೆಳ್ಳಿ ಮಹೋತ್ಸವದ ಸಮಾರೋಪದ ಅಂಗವಾಗಿ 48 ದಿನಗಳ ನಡೆಯುವ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ, ಬಾಲಭೋಜನ ಕಾಯಕ್ರಮದಲ್ಲಿ ಆರ್ಶೀವಚನ ನೀಡಿದರು.
ದ.ಕ. ಜಿಲ್ಲಾ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಯಾನಂದ ಪೆರಾಜೆ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅಳಿಕೆ ಶ್ರೀಸತ್ಯಸಾಯಿ ಲೋಕಸೇವಾ ಪ್ರೌಢ ಶಾಲೆಯ ಶಿಕ್ಷಕ ಯತಿರಾಜ , ಮುಳಿಯ ದಂಬೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಅಧ್ಯಕ್ಷ ಆನಂದ ಶೆಟ್ಟಿ, ಸೋಮೇಶ್ವರ ಪರಿಜ್ಞಾನ ಕಾಲೇಜು ಉಪನ್ಯಾಸಕಿ ಸುಶ್ಮಾ ರಾಕೇಶ್ ಮಂಗಳೂರು, ಮಾಣಿಲ ಶ್ರೀ ಮಹಾಲಕ್ಷ್ಮಿ ಮಹಿಳಾ ಪ್ರತಿಷ್ಠಾನದ ಗೌರವಾಧ್ಯಕ್ಷೆ ರೇವತಿ ಪೆರ್ನೆ, ಅಧಕ್ಷೆ ವನಿತಾ ವಿ. ಶೆಟ್ಟಿ , ಶ್ರೀಧಾಮ ಮಿತ್ರ ಮಂಡಳಿಯ ಕಾರ್ಯದರ್ಶಿ ಜಗನ್ನಾಥ ಉಪಸ್ಥಿತರಿದ್ದರು.
ರಾಕೇಶ್ ಕೆ.ಪಿ ಮಾಣಿಲ ನಿರೂಪಿಸಿದರು. ದೇವದಾಸ್ ಮಂಜೇಶ್ವರ ವಂದಿಸಿದರು. ರೇಖಾ ಎಸ್ ಕಾಮತ್ ಕುಟುಂಬದವರು ಗುರುದಕ್ಷಿಣೆ ಸಮರ್ಪಿಸಿದರು. ಶ್ರೀಗಳ ನೇತೃತ್ವದಲ್ಲಿ ಗಣಪತಿ ಹವನ, ಶ್ರೀ ಗುರುಪೂಜೆ ಶ್ರೀ ನಾಗದೇವರ ಪೂಜೆ , ಗೋಮಾತಾ ಪೂಜೆ, ವಾಯನ ಬಾಲಭೋಜನ, ಯಜ್ಞಯಾಗಾದಿಗಳು , ನವಗ್ರಹ ಶಾಂತಿ, ಸಾಮೂಹಿಕ ಕುಂಕುಮಾರ್ಚನೆ , ವಿಷ್ಣು ಸಹಸ್ರನಾಮ, ದುರ್ಗಾ ಪೂಜೆ , ಆಶ್ಲೇಷ ಬಲಿ, ಮಹಾಪೂಜೆ ,ಅನ್ನಸಂತರ್ಪನೆ ನಡೆಯಿತು.