ಕರುಣದಿ ಪೊರೆಯೋ…

ಕರುಣದಿ ಪೊರೆಯೋ…

ನಂಬಿದೆ ನಿನ್ನನು ವಿಠ್ಠಲರಾಯನೆ
ಕರುಣದಿ ಪೊರೆಯೋ ಎನ್ನ
ಉಸಿರಲಿ ನಿನ್ನಯ ನೆನಪದು ಹೊಮ್ಮಲಿ
ವಿಠ್ಠಲ ವಿಠ್ಠಲ ಜೈ ಜೈ

ಕಾಣುತ ನಿನ್ನಯ ಅಂದದ ಮೊಗವನು
ಮನದಲಿ ಹೊಮ್ಮಲು ಭಕುತಿ
ಮರೆಯಿತು ಬಾಳಿನ ನೋವಿನ ಚಣಗಳು
ನಿನ್ನಯ ನೆನಪದು ಮುಕುತಿ

ನಡೆಯುತ ಬಂದೆವು ನಿನ್ನನು ನೋಡಲು
ಬಂಧು ಜನಗಳ ಜೊತೆಯೆ
ಭೀಮನದಿಯಲಿ ಮುಳುಗಿಯೇಳಲು
ಪಾಪವು ಕರಗಿತು ದೊರೆಯೆ

ಭಕುತರ ಸಂಕಟ ಹರಿಸಲು ನಿಂತಿಹೆ
ಕರಗಳ ಕಟಿಯಲ್ಲಿಡುತ
ರುಕ್ಮಿಣಿ ಸಹಿತವೆ ದರುಶನ ನೀಡುವೆ
ಎಲ್ಲರಿಗಭಯವ ಕೊಡುತ

ಡಾ. ವೀಣಾ ಎನ್ ಸುಳ್ಯ

Related Articles

Back to top button