ಬುದ್ಧನ ಸ್ವಗತ…
ಬುದ್ಧನ ಸ್ವಗತ…
ಎನಿತು ದಿನದಿ ಕಾಡುತ್ತಿತ್ತು
ಅದೇ ಪ್ರಶ್ನೆಯು
ಮತ್ತೆ ಮತ್ತೆ ಯೋಚಿಸಲೂ
ನಿಗೂಢವಾಯಿತು
ಮನದ ತುಂಬ ಅದೇ ಗೊಜಲು
ಬಿಡಿಸಿಕೊಳ್ಳದೆ
ಸೋಲುತಿರಲು ಕುಸಿಯುತಿರಲು
ನೊಂದುಹೋದೆನು
ಎನಿತು ಕಠಿಣ ಎನಿತು ನೋವು
ಜೀವ ಹಿಂಡಲು
ಎಲ್ಲವನ್ನು ತೊರೆದು ನಡೆಯೆ
ಭಯವು ಮೂಡಿತು
ಪ್ರೀತಿಯನ್ನು ಬಿಟ್ಟು ಬಿಡಲೆ
ತನುವ ಸುಖವನು
ಅನಿತ್ಯವೆಂದು ಅರಿತ ಮೇಲೆ
ಅಂಟಿಕೊಳ್ಳಲೇ
ಮನದ ಬಯಕೆಯೇರಿ ಬರುವ
ಕುದುರೆಯಂತೆಯೇ
ಸುಖದ ಕ್ಷಣವು ಕರಗುವಂತ
ಫೇನದಂತೆಯೇ
ಅರಿಯಬೇಕು ಕಾರಣವನು
ಮನದ ಆಟಕೆ
ಮನದ ತಿಮಿರ ಕಳೆಯಬೇಕು
ಪ್ರಣತಿ ಹಚ್ಚುತಾ
ನನ್ನೊಳಗಿನ ಅಂಧಕಾರ
ತೊಳೆಯಲೆಂದು ನಾ
ತೊರೆದೆ ನಾನು ಎಲ್ಲವನ್ನು
ಮನದ ಮೂಲದಿ
ಕಾಡು ಮೇಡು ಅಲೆದೆ ನಡೆದೆ
ಸತ್ಯ ಹುಡುಕುತಾ
ಜನರ ಮನವ ಹೊಕ್ಕು ನಡೆದೆ
ಬೆಳಕು ಅರಸುತ
ಬಯಕೆ ಗರ್ಭಸ್ಥಾನ ಕಂಡು
ಮಾಯೆ ಕಳೆಯಿತು
ಮತ್ತೆ ಮತ್ತೆ ಹುಟ್ಟಿ ಬರುವ
ರೀತಿ ಅರಿಯಿತು
ಬಯಕೆ ಚಿಗುರು ಬೆಳೆಯದಂತೆ
ಮೌನವಹಿಸಲು
ಎಲ್ಲ ಅನಿತ್ಯವೆಂಬ ನಿಜದಿ
ಮನವು ಅರಳಿತು
ನೋವು ನಲಿವು ಎಲ್ಲವನ್ನು
ಮೀರಿ ಸುಖಿಸಿತು
ಮೈತ್ರಿ (ಮೆತ್ತ)ಕರುಣೆ ಮುದಿತ ಜತೆಗೆ
ಉಪೇಕ್ಷ(ಉಪೇಕ್ಖ) ಸೇರಿತು
ರಚನೆ: ಡಾ. ವೀಣಾ ಎನ್ ಸುಳ್ಯ