ಭರತನಾಟ್ಯದಲ್ಲೊಂದು ಅಪೂರ್ವ ಪ್ರಯೋಗ – ನಾಟ್ಯಾಯನ…

ರಸೋತ್ಪತ್ತಿಯನ್ನೇ ಲಕ್ಷ್ಯವಾಗಿರಿಸಿಕೊಂಡ ಪ್ರದರ್ಶನ ಕಲೆಗಳಿಗೆ ಭರತನಾಟ್ಯವು ಹೊರತಲ್ಲ. ಈ ಗುರಿ ಸಾಧನೆಗೆ ಅನೇಕ ಪ್ರಯೋಗಗಳು ನಡೆಯುತ್ತಲೇ ಬಂದಿವೆ. ಅಂತಹವುಗಳಲ್ಲಿ ವಿನೂತನವೆನಿಸಬಲ್ಲ, ವಿಸ್ಮಯ ಹುಟ್ಟಿಸುವ, ಧ್ವನಿಪೂರ್ಣ ಪ್ರಯೋಗವೊಂದು ಉಡುಪಿಯಲ್ಲಿ ನಡೆಯಿತು. ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಪೀಠಾಧಿಪತಿಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಶುಭಾಶೀರ್ವಾದ ಮತ್ತು ದಿವ್ಯೋಪಸ್ಥಿತಿಗಳೊಂದಿಗೆ ದೂರದರ್ಶನ ಕಲಾವಿದೆ ವಿದುಷಿ ಅಯನಾ.ವಿ.ರಮಣ್ ಮೂಡುಬಿದಿರೆ ಮತ್ತು ಬಳಗದವರು ಮದ್ವಮಂಟಪದಲ್ಲಿ ಇತ್ತೀಚೆಗೆ ನಡೆಸಿಕೊಟ್ಟ “ನಾಟ್ಯಾಯನ” ನೃತ್ಯ ಕಾರ್ಯಕ್ರಮ ಪಂಡಿತರ ಸಹಿತ ಸರ್ವತ್ರ ಪ್ರಶಂಸೆಗೆ ಪಾತ್ರವಾಯಿತು.
ಪ್ರಧಾನ ಶೀರ್ಷಿಕೆಯ ಅಡಿಬರಹವೇ ಹೇಳುವಂತೆ ಸಂಗೀತ,ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ನಾಟಕಗಳ ವಿಶಿಷ್ಟ ಸಮ್ಮಿಲನವೆನಿಸುವ ಈ ಕಾರ್ಯಕ್ರಮ ವ್ಯಾಸ, ಮಧ್ವ ಗುರುಪರಂಪರೆಯನ್ನು , ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪರ್ಯಾಯ ಪೀಠಸ್ಥ ಯತಿದ್ವಯರನ್ನು ನಿರ್ವಚಿಸುವ ಸನ್ಯಾಸ ಸೂಕ್ತದೊಂದಿಗೆ ಪ್ರಾರಂಭವಾಯಿತು. ಅಯನಾ ಅವರ ಸಸ್ವರ ಕಂಠಸ್ಥ ಪಠಣಕ್ಕೆ ಸಭೆಯಲ್ಲಿದ್ದ ವಿದ್ವಾಂಸರು ದನಿಗೂಡಿಸಿದರು.
ನೃತ್ಯ ಕಲಾವಿದರಾಗಿ ಬೆಳೆಯುವವರಿಗೆ ಸಾಹಿತ್ಯ ಜ್ಞಾನ ಇರಬೇಕೆನ್ನುವ ಆಶಯವನ್ನು ಬಿಂಬಿಸುವುದರ ಪ್ರತೀಕವಾದದ್ದು ನಿರರ್ಗಳ ಕವಿ ನಾಮಾವಳಿ. ಕನ್ನಡ ಸಾಹಿತೀ ಪರಂಪರೆಯ ಬರೋಬ್ಬರಿ 220ಕ್ಕೂ ಅಧಿಕ ಪ್ರಾತಿನಿಧಿಕ ಹೆಸರುಗಳನ್ನು ಐದು ನಿಮಿಷಗಳ ಒಳಗೆ ಉಚ್ಚರಿಸಿದ ಅಯನಾ ತನ್ನ ಅದ್ಭುತ ಸ್ಮರಣ ಶಕ್ತಿಯಿಂದ ಎಲ್ಲರ ಹುಬ್ಬೇರುವಂತೆ ಮಾಡಿದರು. ಸರಿ ಉತ್ತರ ಲೆಕ್ಕಿಸಿದ ಸಭಿಕರಿಗೆ ಶ್ರೀಗಳು ಬಹುಮಾನಗಳನ್ನು ವಿತರಿಸಿದರು.

ಸರ್ವರನ್ನು ಅಚ್ಚರಿಯಲ್ಲಿ ಕೆಡವಿದ ಇನ್ನೊಂದು ಚಮತ್ಕಾರ ಚತುರವಧಾನ. ಏಕಕಾಲದಲ್ಲಿ ಎರಡೂ ಕೈಗಳಲ್ಲಿ ಬೇರೆ ಬೇರೆ ತಾಳ ಹಾಕುತ್ತಾ, ಸಂವತ್ಸರಗಳ ಹೆಸರು ಹೇಳುತ್ತಾ, ಒಂದು ಹುಬ್ಬಿನ ಚಲನೆ (ರೇಚಿತ) ಯನ್ನು ಅಯನಾ ಪ್ರದರ್ಶಿಸಿದರು. ಅದೇ ರೀತಿ ಸಭಿಕರ ಪ್ರಶ್ನೆಗಳಿಗನುಗುಣವಾಗಿ 35 ತಾಳಗಳನ್ನು ಐದು ಗತಿಗಳಲ್ಲಿ ಹಾಕಿ ತೋರುವ, ಮೃದಂಗ ವಾದಕರು (ನಾರಾಯಣ ಬಳ್ಳೂಕರಾಯ) ಅದನ್ನು ಪುನರಾವರ್ತಿಸುವಂತಹ ಬೇರೆ ಬೇರೆ ಚುಟುಕು ಚಟುವಟಿಕೆಗಳು ನೃತ್ಯ ಪ್ರಸ್ತುತಿಗಳಿಗೆ ಪೂರಕವಾಗಿ ನಿರೂಪಿತವಾದವು.
ಗಮನ ಸೆಳೆದ ಮಂಥ ಪಾಶಧರ:
ಮಥುರೆಯಲ್ಲಿ ತಾಯಿ ದೇವಕಿಗಾಗಿ ‘ಬಾಲ’ನಾಗುವ ಕೃಷ್ಣ ಕೈಯಲ್ಲಿ ಮಂತು – ಪಾಶಗಳನ್ನು ಧರಿಸುವಲ್ಲಿಂದ ಆರಂಭಿಸಿ, ತದನಂತರದಲ್ಲಿ ರುಕ್ಮಿಣೀ ಕರಾರ್ಚಿತನಾಗಿ, ಕಾಲಾಂತರದಲ್ಲಿ ಆಚಾರ್ಯ ಮದ್ವರಿಂದ ಉಡುಪಿಯಲ್ಲಿ ಪ್ರತಿಷ್ಠಿತನಾಗುವ ಪುರಾಣ ಶ್ಲೋಕ ಸಮುಚ್ಛಯ (ಸಂಗ್ರಹ:ವಿ|ಮಹೀತೋಷ ಆಚಾರ್ಯ) ಆಧಾರಿತ ಚೊಚ್ಚಲ ಪ್ರಯೋಗವನ್ನು ಅಯನಾ ಯಶಸ್ವಿಗೊಳಿಸಿದರು. ತುಸು ವೃದ್ಧೆಯಾಗಿರುವ ದೇವಕಿ, ಪ್ರೌಢಕೃಷ್ಣ, ಬಾಲಕೃಷ್ಣ, ರುಕ್ಮಿಣೀ, ಮಧ್ವಾಚಾರ್ಯರು ಮುಂತಾದ ಬಹುಪಾತ್ರಗಳ ಸೂಕ್ಷ್ಮವರಿತು ಅಭಿನಯಿಸಿದ ಅಯನಾ ಸುಮಾರು 25 ನಿಮಿಷಗಳ ಅವಧಿಯಲ್ಲಿ ಮಂಥಪಾಶಧರನನ್ನು ಪ್ರಸ್ತುತಪಡಿಸಿದರು. ಆಯ್ದ ಶ್ಲೋಕಗಳ ಸುಶ್ರಾವ್ಯ ಗಾಯನ (ನಾರಾಯಣ ಸರಳಾಯ) ಮತ್ತು ಸಾಂದರ್ಭಿಕ ವಿಶೇಷ ಪರಿಣಾಮ ಹಾಗೂ ಅಭಿನಯ ವಿಸ್ತಾರ ಭಾಗಗಳ ಪೂರಕ ಕೀಬೋರ್ಡ್ ಹಿನ್ನೆಲೆ (ಸತೀಶ್ ಮಂಗಳೂರು) ಪುಷ್ಟಿ ಒದಗಿಸಿದವು.
ಬಹುಶ್ರುತ ದಾಸ ಸಾಹಿತ್ಯ ‘ನೀನ್ಯಾಕೋ ನಿನ್ನ ಹಂಗ್ಯಾಕೋ’ (ರಾಗ ಮಾಲಿಕೆ-ಆದಿತಾಳ) ದಲ್ಲಿ ಗಜೇಂದ್ರ ಮೋಕ್ಷದ ಕಥಾಭಿನಯ ನಿರೂಪಿತವಾಯಿತು. ಎರಡನೆಯ ಚರಣದಲ್ಲಿ ಹಿರಣ್ಯಕಶಿಪುವಿನ ಕ್ರೌರ್ಯ- ಪ್ರಹ್ಲಾದನ ಭಕ್ತಿ, ಉಗ್ರ ನೃಸಿಂಹಾವತಾರಗಳನ್ನು ಪರಿಣಾಮಕಾರಿಯಾಗಿ ಅಭಿನಯಿಸಿದ ಅಯನಾ ಅಕ್ಷಯಾಂಬರ ವಿಲಾಸದಲ್ಲಿ ಮನೋಧರ್ಮ ಅಭಿನಯದ ಉತ್ಕೃಷ್ಟ ಮಾದರಿಯಾದರು. ದ್ರೌಪದಿಯ ಸ್ಥಿತಿ, ಅಸಹಾಯಕತೆ, ಆಕ್ರೋಶಗಳನ್ನು ದುಶ್ಯಾಸನನ ಅಟ್ಟಹಾಸ, ವಿಕೃತಿಗಳನ್ನು ಲೀಲಾಜಾಲವಾಗಿ ತೋರಿ ಒಟ್ಟು ಪ್ರಕರಣದ ಪ್ರಮುಖ ಆಶಯವಾಗಿರುವ ಸಂಪೂರ್ಣ ಶರಣಾಗತಿಯನ್ನು ಚೆನ್ನಾಗಿ ಪ್ರತಿಪಾದಿಸಿದರು. ಪ್ರಾರಂಭದ ಪಂಚದೇವತಾಸ್ತುತಿ ಮತ್ತು ಕೊನೆಯಲ್ಲಿ ನರ್ತಿಸಿದ ಭಾಗ್ಯದ ಲಕ್ಷ್ಮಿ ಬಾರಮ್ಮ (ಮಧ್ಯಮಾವತಿ- ತಾಳ ಮಾಲಿಕೆ) ಗಳಲ್ಲಿ ಕೂಡ ಅಯನಾ ಅನನ್ಯತೆಯನ್ನು ಕಾಯ್ದುಕೊಂಡರು. ಸಹಕಲಾವಿದೆಯಾಗಿ ವೇದಿಕೆ ಹಂಚಿಕೊಂಡ ಕುಮಾರಿ ಮೇಘನಾ ಭಟ್ ಶೃಂಗೇರಿ ಕೂಡ ನೃತ್ತ ಪ್ರಧಾನ ಪ್ರಸ್ತುತಿಗಳೊಂದಿಗೆ ಗಮನ ಸೆಳೆದರು. ಸರಸ್ವತಿ ಕೌತ್ಪo ಮತ್ತು ತಿಲ್ಲಾನಗಳಲ್ಲಿ ತನ್ನ ಚುರುಕಿನ ನಡೆ, ಅರೆಮಂಡಿ, ಲಯ ಖಾಚಿತ್ಯಗಳಿಗೆ ಸಾಕ್ಷಿ ಒದಗಿಸಿದರು. ಒಟ್ಟಿನಲ್ಲಿ ಸುಮಾರು ಎರಡು ಗಂಟೆಗಳ ಅವಧಿಯ ಈ ಪರಿಣಾಮ ರಮಣೀಯ ಪ್ರಯೋಗ (ಪರಿಕಲ್ಪನೆ- ನಿರ್ದೇಶನ -ನಿರೂಪಣೆ: ಶ್ರೀ ರಮಣಾಚಾರ್ಯ, ಮಂಗಳೂರು) ವಿಭಿನ್ನ ಆಲೋಚನೆ ಮತ್ತು ಕಠಿಣ ಪರಿಶ್ರಮಗಳ ಹಿನ್ನೆಲೆಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ನೇಪಥ್ಯದಲ್ಲಿ ( ಸಮಗ್ರ ನಿರ್ವಹಣೆ: ಡಾ| ಮುಕಾಂಬಿಕಾ ಜಿ.ಎಸ್, ಧ್ವನಿ -ಬೆಳಕು: ಐತಾಳ್ ಸೌಂಡ್ಸ್ ಆಂಡ್ ಲೈಟ್ಸ್ ಉಡುಪಿ, ಪ್ರಸಾಧನ: ಪ್ರಕಾಶ್) ಸಹಕರಿಸಿದ ಎಲ್ಲರೂ ಕಾರ್ಯಕ್ರಮದ ಒಟ್ಟು ಯಶಸ್ಸಿನಲ್ಲಿ ಪಾಲು ಪಡೆದರು.
ಕಲಾವಿದೆಯ ಅದ್ಭುತ ಸ್ಮರಣ ಶಕ್ತಿಯನ್ನು, ಅಭಿನಯ ಸಾಮರ್ಥ್ಯವನ್ನು ವಿಶೇಷವಾಗಿ ಮೆಚ್ಚಿಕೊಂಡ ಪರ್ಯಾಯ ಶ್ರೀಗಳು ಶಿಷ್ಯ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರೊಡಗೂಡಿ ಕಲಾ ಕುಟುಂಬವನ್ನು ಆಶೀರ್ವದಿಸಿ, ಕಲಾವಿದರಿಗೆ ಶಾಲು- ಫಲ -ಮಂತ್ರಾಕ್ಷತೆಯಿತ್ತು ಹರಸಿದರು.
ಶತಾವಧಾನಿ ಡಾ. ಉಡುಪಿ ರಾಮನಾಥ ಆಚಾರ್ಯ, ಹಿರಿಯ ನೃತ್ಯ ಕಲಾವಿದ ವಿದ್ವಾನ್ ಶ್ರೀನಾಥ್, ಖ್ಯಾತ ಲೇಖಕ ಬಿ ಭಾಸ್ಕರ್ ರಾವ್, ಒಟ್ಟು ಕಾರ್ಯಕ್ರಮದ ದಾನಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ ದಂಪತಿಯರು ಶಹಬ್ಬಾಸ್ ಗಿರಿ ನೀಡಿದರು.
ಇಂತಹ ಕಾರ್ಯಕ್ರಮಗಳು ನಿತ್ಯ ನಿರಂತರವಾಗಿ ಮಧ್ವ ಮಂಟಪ- ರಾಜಾಂಗಣ ಎರಡೂ ಕಡೆ ನಡೆಯುವುದಕ್ಕೆ ಅವಕಾಶವಿತ್ತಿರುವ ವಿಶ್ವಗೀತಾ ಪರ್ಯಾಯ ಶ್ರೀಗಳು, ಸಹಕರಿಸುತ್ತಿರುವ ಶ್ರೀಮಠದ ದಿವಾನರು ಮತ್ತು ಸಿಬ್ಬಂದಿ ವರ್ಗ, ಶ್ರದ್ಧೆಯಿಂದ ಸಂಯೋಜಿಸುತ್ತಿರುವ ಸಾಂಸ್ಕೃತಿಕ ಸಮಿತಿಯ ರಮೇಶ್ ಭಟ್ ತಂಡ, ಅಷ್ಟೇ ಕಾಳಜಿಯಿಂದ ಕಾರ್ಯಕ್ರಮ ವೀಕ್ಷಿಸುವ ಸಹೃದಯ ರಸಿಕರು ಅಭಿನಂದನಾರ್ಹರು.

ಲೇ: ಡಾ| ಎಸ್.ವಿ. ಪ್ರಸಾದ್
ಸಹಾಯಕ ಪ್ರಾದ್ಯಾಪಕರು,ಡೇಟಾ ಸೈನ್ಸ್ ವಿಭಾಗ
ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು, ಪುತ್ತೂರು.

whatsapp image 2024 09 14 at 12.38.47 pm

whatsapp image 2024 09 14 at 12.38.46 pm

whatsapp image 2024 09 14 at 12.38.49 pm

Sponsors

Related Articles

Back to top button