ಗಝಲ್…

ಗಝಲ್…

ಬಣ್ಣದ ಲೋಕವು ಹೃದಯವ ಸೆಳೆಯಲು
ಉಸಿರಲಿ ಒಲವು ಹರಿಯದೇ ಸಖಿ
ತೀರದ ಬಯಕೆಯ ಕನಸನು ಕಟ್ಟುತ
ಇಹದ ನಲಿವು ಮರೆಯದೇ ಸಖಿ

ಎತ್ತರಕ್ಕೇರಲು ಇಳಿಯಲು ಬೇಕಿದೆ
ಎನ್ನುವ ನಿಯಮವನರುಹದೆ ಪಾದಪ
ಕತ್ತಲು ಕವಿಯುವ ಮುನ್ನವೆ ಗೂಡನು
ಸೇರಲು ಬಲವು ಪಡೆಯದೇ ಸಖಿ

ಇಂದಿನ ಬದುಕಿನ ಸುಖವನು ಕಾಣುತ
ಮುಳುಗುವ ದಿನಪಗೆ ವಿದಾಯ ಹೇಳುವ
ಹಿಂದಿನ ದಿನಗಳ ನೋವನು ಮರೆಯುತ
ನಡೆಯಲು ಗೆಲುವು ಕುಣಿಯದೇ ಸಖಿ

ದೂರದ ಬೆಟ್ಟವು ನುಣ್ಣಗೆ ಯೆನ್ನುವ
ನುಡಿಯದು ಜನರಲಿ ಪ್ರಚಲಿತವಹುದು
ಮಣ್ಣಿನ ಋಣವು ಜೀವವ ಕಾಡಲು
ಚಿತ್ತದಿ ಛಲವು ಬೆಳೆಯದೇ ಸಖಿ

ಬೆಟ್ಟದಿ ಚಿಮ್ಮುತ ಬಯಲನು ಸೇರುತ
ಓಡುವ ನದಿಯದು ಲೋಕವ ಪೊರೆವುದು
ಸ್ವಾರ್ಥವ ಮರೆತು ತ್ಯಾಗದಿ ದುಡಿದರೆ
ವಿಪುಲ ಫಲವು ದೊರೆಯದೇ ಸಖಿ

ಡಾ. ವೀಣಾ ಎನ್ ಸುಳ್ಯ

Sponsors

Related Articles

Back to top button