ತುಳುನಾಡಿನ ವಿಶಿಷ್ಟ ಆಚರಣೆ ತುಳುವಾಲ ಬಲಿಯೇಂದ್ರ ಲೆಪ್ಪು…

ಲೇ: ವಾಣಿ ರಘುನಾಥ್ ಕಣ್ವತೀರ್ಥ

ದೀಪಾವಳಿ ಪ್ರಸಿದ್ಧ ಹಬ್ಬ .ಜನಪ್ರಿಯ ಮಾಹಾಪರ್ವ.ಬೆಳಕಿನ ಹಬ್ಬ. ದೀಪಗಳ ಪರಂಪರೆಯನ್ನು ಹೊಂದಿರುವ ಲಕ್ಷ ದೀಪೋತ್ಸವ.ನಾಲ್ಕೈದು ದಿನಗಳೂ ದೇಶಾದ್ಯಂತ ಆಚರಿಸುತ್ತಾರೆ.
ಮಹಾವಿಷ್ಣುವಿನ ನರಕಾಸುರ ವಧೆ ಮತ್ತು ಬಲೀಂದ್ರ ವಿಜಯಗಳ ಪೂಜೆ ,ಮಹಾಲಕ್ಷ್ಮಿ ಯ ಪೂಜೆ,ಮಹಾದೇವನ ಪೂಜೆ,ಮಹಾರಾತ್ರಿ ಪೂಜೆ,ಕುಬೇರ ಪೂಜೆ,ಯಮಧರ್ಮರಾಜನ ಪೂಜೆ ಮುಂತಾದ ಎಲ್ಲಾ‌ ಪೂಜೆಗಳಲ್ಲೂ ದೀಪಗಳು ಬೆಳಗುತ್ತವೆ ಮಾತ್ರವಲ್ಲ ಮನುಷ್ಯರಿಗೂ ಪ್ರಾಣಿಗಳಿಗೂ ದೀಪಾರತಿ ನಡೆಯುತ್ತದೆ. ದೇಶದೆಲ್ಲೆಡೆ ಭಾರತೀಯರ ವಿಶ್ವ ಪ್ರಸಿದ್ಧ ಹಬ್ಬವಾಗಿದೆ.

ತುಳುನಾಡಿನ ಪರ್ಬ
ತುಳುನಾಡಿನಲ್ಲಿ ಮೂರು ದಿನಗಳ ಹಬ್ಬವನ್ನು ಪರ್ಬ ಎಂದು ಕರೆಯುತ್ತಾರೆ, ಆಚರಿಸುತ್ತಾರೆ.
ಮೊದಲನೇ ದಿನ ನರಕ ಚತುರ್ದಶಿ. ಮೊದಲ ದಿನ ಸಂಜೆ ಸ್ನಾನದ ಹಂಡೆಗೆ ನೀರು ತುಂಬಿಸಿ ಇಡುತ್ತಾರೆ.ಹಂಡೆಗೆ ಮುಳ್ಳುಸೌತೆ ಬಳ್ಳಿಯನ್ನು ಸುತ್ತಿಡುತ್ತಾರೆ. ಸ್ಥಳೀಯವಾಗಿ ಸಿಗುವ ಹೂವಿನ ಮಾಲೆ ಹಾಕಿ ಅಲಂಕಾರ ಮಾಡುತ್ತಾರೆ.
ಮರುದಿನ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಬೆಂಕಿಹಾಕಿ ಬಿಸಿನೀರು ಕಾಯಿಸುತ್ತಾರೆ. ಬೆಳಿಗ್ಗೆ 5 ಗಂಟೆಗೇ ಮನೆಯವರೆಲ್ಲಾ ಏಳುತ್ತಾರೆ. ಮನೆಯ ಅಮ್ಮ ಒಬ್ಬೊಬ್ಬರನ್ನೇ ದೇವರ ಮಂಟಪದ ಎದುರುಗಡೆ ಕುಳ್ಳಿರಿಸಿ ಹಣೆಗೆ ಕುಂಕುಮ ಹಚ್ಚಿ,ತೆಂಗಿನ ಎಣ್ಣೆ ತಲೆ ಮೈಗೆ ಹಚ್ಚುತ್ತಾರೆ.ತೈಲಾಭ್ಯಂಜನ.
ಆಮೇಲೆ ಬಚ್ಚಲು ಕೊಟ್ಟಿಗೆಯಲ್ಲಿ ಬಿಸಿಬಿಸಿ ನೀರನ್ನು ಹಾಕಿ ಅಭ್ಯಂಗ ಸ್ನಾನ ಮಾಡಿಸುತ್ತಾರೆ.ಪರಸ್ಪರ ಸಹೋದರರೂ , ಪತಿಪತ್ನಿಯರು ಮೈತಿಕ್ಕುವುದೂ ಇದೆ. ಎಣ್ಣೆ ಜಿಡ್ಡು ತೆಗೆಯಲು ಕಡ್ಲೆಹುಡಿ ,ಸೀಗೆಹಡಿ ಬಳಸಿದರೆ ಮೈಯುಜ್ಜಲು ತೆಂಗಿನ ನಾರನ್ನು ಉಪಯೋಗಿಸುತ್ತಾರೆ.
ಸ್ನಾನ ಮಾಡಿ ಬಂದ ಬಳಿಕ ದೇವರಿಗೆ ಕೈಮುಗಿದು, ದೈವಗಳಿಗೆ ನಮಿಸಿ , ಹಿರಿಯರಿಗೆ ನಮಸ್ಕಾರ ಮಾಡುತ್ತಾರೆ. ಹೊಸಬಟ್ಟೆ ಧರಿಸಿ ಸಡಗರ ‌ಏರ್ಪಡುತ್ತದೆ.‌ ಆಮೇಲೆ ಉದ್ದಿನ ದೋಸೆ,ಬೆಲ್ಲಹಾಕಿದ ಅವಲಕ್ಕಿ ಹಾಗೂ ಬಾಳೆಹಣ್ಣಿನ ಉಪಾಹಾರವನ್ನು ಮನೆಯವರೆಲ್ಲಾ ಒಟ್ಟಿಗೆ ಕುಳಿತು ಸೇವಿಸುವುದು ಕೌಟುಂಬಿಕ ಮಿಲನ .ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆ ತರಲೇಬೇಕು,ಮಕ್ಕಳಿಗೆಲ್ಲ ಪಟಾಕಿ ಸುಡುವ ಹಬ್ಬ. ಬೇಕೆಬೇಕು. ಅಂಗಳದಲ್ಲಿ ತುಳಸಿ ಕಟ್ಟೆಯ ಹತ್ತಿರ ಹಣತೆಗಳು,ಸುತ್ತಲೂ ಸಾಲು ಸಾಲು ಹಣತೆ ದೀಪಗಳು ರಾರಾಜಿಸುತ್ತವೆ.ಅಳಿಯಂದಿರನ್ನು ಮನೆಗೆ ವಿಶೇಷವಾಗಿ ಆಮಂತ್ರಿಸಲಾಗುತ್ತದೆ‌.

ಈ ದಿನ ಲಕ್ಷ್ಮೀ ಪೂಜೆ ಮಾಡುತ್ತಾರೆ‌. ಎಲ್ಲರೂ ಸೇರಿ ಹಣತೆಗಳನ್ನು ಹಚ್ಚಿ ಸಂಭ್ರಮ ಪಡುತ್ತಾರೆ. ಕೆಲವೆಡೆ ಎಣ್ಣೆ ದಾನ,ವಸ್ತ್ರ ದಾನ ಮಾಡುವ ಕ್ರಮವೂ ಇದೆ.

ದೀಪಾವಳಿಯ ಎರಡನೇ ದಿನದಂದು ಅಮಾವಾಸ್ಯೆ.ರಾತ್ರಿ ಕೊಳ್ಳಿ ಹಿಡಿದು ತನ್ನ ವಂಶದ ಪಿತೃಗಳಿಗೆ ಮಾರ್ಗವನ್ನು ತೋರಿಸಿತ್ತಾರೆ.ಲಕ್ಷ್ಮೀ ಪೂಜೆಯೂ ನಡೆಯುತ್ತದೆ.ಎಲ್ಲಡೆ ಸಾಲು ದೀಪಗಳು,ವೈವಿಧ್ಯಮಯ ಗೂಡುದೀಪಗಳು,ಬಿರುಸು ಬಾಣಗಳು ಆಕಾಶದೆತ್ತರ ಮಿನುಗುತ್ತವೆ. ಇಂದು ಬೆಳಕಿನ ಹಬ್ಬದ ಸಂಭ್ರಮ.
ಮೂರನೇ ದಿನ ಶುಕ್ಲ ಪಕ್ಷದ ಪಾಡ್ಯ. ಬಲಿ ಪಾಡ್ಯಮಿ. ಗೋಪೂಜೆ,ಬಲೀಂದ್ರ ಪೂಜೆ,ಅಂಗಡಿ ಪೂಜೆಗಳನ್ನು ಮಾಡುತ್ತಾರೆ.ಗೋವುಗಳಿಗೆ ವಿಶ್ರಾಂತಿ.ಅವುಗಳನ್ನೂ ತೊಳೆದು ಅಲಂಕಾರ ಮಾಡಿ‌ ಆಹಾರ ನೀಡಿ ಆರತಿ ಬೆಳಗಿ ಗೋಪೂಜೆ ನಡೆಯುತ್ತದೆ.
ವಿಷ್ಣುವಿನಿಂದ ವಾಮನ ಅವತಾರದಲ್ಲಿ ಪರಾಜಿತನಾಗಿ ಪಾತಾಳಕ್ಕೆ ತಳ್ಳಲ್ಪಟ್ಟ ಬಲಿ ಚಕ್ರವರ್ತಿ ವರ್ಷಕ್ಕೊಮ್ಮೆ ಭೂಲೋಕ್ಕೆ ಬಂದು ಬೆಳೆ ಭಾಗ್ಯವನ್ನು ನೋಡಲುಆಮಿಸುತ್ತಾನೆ ಎಂಬ ನಂಬಿಕೆ ಇದೆ.ದೀಪಹಚ್ಚಿ ಬತ್ತದ ಗದ್ದೆಯ ಬಳಿಯಲ್ಲಿ ದೊಂದಿ ದೀಪದ ಬೆಳಕಿನಲ್ಲಿ ಕೂ ಬಲಿಯೇಂದ್ರ ಕೂ ಬಲಿಯೇಂದ್ರ ಎಂದು ಕರೆದು ಮೂರು ಸಲ ಕೂ..ಕೂ.. ಕೂ ಎಂದು ಕರೆದು ಉದ್ದಿನ ದೋಸೆ ಸಿಹಿ ಅವಲಕ್ಕಿಯನ್ನು ಇಟ್ಟು ಬರುತ್ತಾರೆ. ಬಲಿಚಕ್ರವರ್ತಿಯ ದಾನವ ಪ್ರವೃತ್ತಿಗಾಗಿ ಅವನಿಗೆ ಶಿಕ್ಷೆಯನ್ನು ಮತ್ತು ಸಜ್ಜನ ರಕ್ಷಣೆಗೆ ವಾಮನ ಅವತಾರ ತಾಳಿದ ಶ್ರೀ ವಿಷ್ಣು ದಾನವನ್ನು ಕೇಳಿ ತ್ರಿವಿಕ್ರಮನಾಗಿ ಬೆಳೆದು ಒಂದು ಹೆಜ್ಜೆಯಲ್ಲಿ ಭೂಲೋಕವನ್ನು,ಎರಡನೇ ಹೆಜ್ಜೆಗೆ ಆಕಾಶವನ್ನು ಅಳೆದು,ಮೂರನೇ ಹೆಜ್ಜೆಯನ್ನು ಎಲ್ಲಿಡಲಿ ಎಂದು ಬಲಿಚಕ್ರವರ್ತಿಯಲ್ಲಿ ಕೇಳಿದರೆ, ತನ್ನ ಶಿರದ ಮೇಲೆ ಇಡುವಂತೆ ಹೇಳುತ್ತಾನೆ ಬಲಿಚಕ್ರವರ್ತಿ. ವಿಷ್ಣು ಭಕ್ತನಾಗಿದ್ದ ಬಲಿಯು ಮಹಾದಾನಿಯಾಗಿದ್ದರೂ ಅಹಂಕಾರಿಯಾಗಿ ಮೆರೆದ ಬಲಿಯನ್ನು ಪಾತಾಳಕ್ಕೆ ಕಳಹಿಸಿದನು.ವರ್ಷಕ್ಕೊಮ್ಮೆ ಭೂಲೋಕ್ಕೆ ಆಗಮಿಸಲು ವರವನಿತ್ತ ಶ್ರೀ ಹರಿಯ ಕತೆಯನ್ನು ಹೇಳುವ ಕ್ರಮ ತುಳುನಾಡಿನ ಹಲವೆಡೆ ಇದೆ..ಪೊಳಲಿ ಶೀನಪ್ಪ ಹೆಗ್ಗಡೆಯವರ ,ಕೆಳಿಂಜ ಸೀತಾರಾಮ ಆಳ್ವರ ತುಳವಾಲ ಬಲಿಯೇಂದ್ರ ತುಳುಭಾಷೆಯಲ್ಲಿರುವ ಪುಸ್ತಕದ ವಾಚನವನ್ನು ಮಾಡುವ ಕ್ರಮವೂ ಕೆಲವು ಊರಿನಲ್ಲಿ ಇದೆ. ಅಂಗಳದಲ್ಲಿ ಬೆಳಕಿನ ಮರ ನೆಟ್ಟು ಕೂ..ಬಲಿಯೇಂದ್ರ ಹೇಳಿ ನೈವೇಧ್ಯ ಸಮರ್ಪಿಸುವ ವಾಡಿಕೆ ಗ್ರಾಮಾಂತರ ಕೃಷಿಕರ ಮನೆಯಲ್ಲಿ ಈಗಲೂ ಇದೆ.

ಅಯೋಧ್ಯೆಗೆ ಆಗಮಿಸಿದ ದಿನವೆಂದು ಉತ್ತರ ಭಾರತದಲ್ಲಿ ಆಚರಿಸುತ್ತಾರೆ.ಕೇರಳದಲ್ಲಿ ಓಣಂ ಹಬ್ಬದ ಹೆಸರಿನಲ್ಲಿ ಬಲಿಯನ್ನು ನೆನೆಯಲಾಗುತ್ತದೆ. ಬಲಿಂದ್ರನನ್ನು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಎಲ್ಲರೂ ಆರಾಧಿಸುತ್ತಾರೆ. ಬಲಿ ಚಕ್ರವರ್ತಿಯು ತುಳುನಾಡನ್ನು ಆಳಿದ್ದ ಚಕ್ರವರ್ತಿ ವರ್ಷಕ್ಕೊಮ್ಮೆ ಬರುವ ಬಲಿ ಯನ್ನು ಕರೆಯುವ ಆಚರಣೆಯೇ ಬಲಿಂದ್ರಲ್ಲೆಪ್ಪು. ಕತ್ತಲಾಗುತ್ತಿದ್ದಂತೆಯೇ ಅಂಗಳದ ಸುತ್ತಲೂ ಮಣ್ಣಿನ ಹಣತೆಗಳನ್ನು ಇರಿಸಿ ತೆಂಗಿನಕಾಯಿ ಎಣ್ಣೆ ಹಾಕಿ ದೀಪವನ್ನು ಹಚ್ಚಲಾಗುತ್ತದೆ. ಬಾಳೆದಿಂಡಿನಿಂದ ಮಾಡಲಾದ ವಿಶಿಷ್ಟವಾದ ಬಲಿಂದ್ರನ ಆಕೃತಿಯನ್ನು ತಯಾರಿಸಿ ಅದರ ಮೇಲ್ಭಾಗದಲ್ಲಿ ಛತ್ರಿಯನ್ನು ಕಟ್ಟಿ ನೆಲ್ಲಿಕಾಯಿ ಮರದ ಸೊಪ್ಪು ಮತ್ತು ವೈವಿಧ್ಯಮಯ ಹೂವುಗಳಿಂದ ಅಲಂಕರಿಸಿ ತುಳಸಿ ಕಟ್ಟೆಯ ಬಳಿ ಇಟ್ಟು, ಜನಪದ ಹಾಡಿನ ಮೂಲಕ ಕರೆಯುವ ಸಂಪ್ರದಾಯ ತುಳುನಾಡಿನ ಅಲ್ಲಲ್ಲಿ ಇದೆ. ತೆಂಗಿನ ಕಾಯಿ ಅವಲಕ್ಕಿ ಗಟ್ಟಿ ಹಾಕಿ ಬಲಿಂದ್ರ ಕೂ.. ಕೂ.. ಕೂ.. ಎಂದು ಮೂರು ಬಾರಿ ಬಲಿಂದ್ರನನ್ನು ಕರೆಯುವ ಪದ್ಧತಿ ಇದೆ. ಗೋವಿನ ಹಟ್ಟಿಗೆ ತೆರಳಿ, ಗೋವಿಗೆ ಬೇಸಾಯಕ್ಕೆ ಬಳಸುವ ಪರಿಕರಗಳಾದ ನೇಗಿಲು ,ನೊಗ,ಹಾರೆ,ಪಿಕ್ಕಾಸು ಮುಳ್ಳಿನ ಪಿಕ್ಕಾಸು, ಕತ್ತಿ, ಕಳಸೆ, ಸೆಗಣಿ ನೀರಿನಿಂದ ಶುಚಿಗೊಳಿಸಿ ಒಂದೆಡೆ ಅಚ್ಚುಕಟ್ಟಾಗಿ ಜೋಡಿಸಿ ಕಾಡಿನಲ್ಲಿ ದೊರೆಯುವ ಹಲವು ಬಗೆಯ ಹೂಬಳ್ಳಿಗಳಿಂದ ಅಲಂಕರಿಸಿ ಪೂಜೆಯನ್ನು ಕೃಷಿಕರು ಮಾಡುತ್ತಿದ್ದರು‌.ಆದರೆ ಈಗ ಹಸುರಿನಿಂದ ಕಂಗೊಳಿಸುವ ಬತ್ತದ ಗದ್ದೆಗಳೂ ಇಲ್ಲ. “ಕೂ.. ಬಲಿಯೇಂದ್ರ ಕೂ..ಕೂ‌.. .ಬಲ ಬಲ ಬಲಿಯೇಂದ್ರ ಕೂ ..ಕೂ..ಎಂದು ನಮ್ಮ ಕೃಷಿಯನ್ನು ನೋಡು ಬಾ ..ಎಂದು ಕರೆಯುವವರೂ ಇಲ್ಲ. ಹಿಂದಿನ ಕೃಷಿ ಸಂಸ್ಕೃತಿಯ ಬಹುದೊಡ್ಡ ಪರ್ಬ ಮೊದಲಿನ ಸಹಜ ಸೌಂದರ್ಯವನ್ನು ಕಳೆದು ಕೊಂಡು ಹಣತೆಯ ಬೆಳಕಿನಲ್ಲಿ ದೀಪಾವಳಿ ಹಬ್ಬದ ಸಂಭ್ರಮವಾಗಿ ಉಳಿದಿದೆ ಅಷ್ಟೇ ….ಮತ್ತೆ ಹಿಂದಿನ ಕಾಲದ ಜಾನಪದ ಸಂಸ್ಕೃತಿ ಮರಳಿ ಮಣ್ಣಿಗೆ ಬರುವುದು ಅಸಂಭವ….

whatsapp image 2025 10 18 at 10.21.08 am

whatsapp image 2025 10 18 at 10.21.08 am (1)

Related Articles

Back to top button