ಹೊಲದಾಗಿನ ಮಾತು…
ಹೊಲದಾಗಿನ ಮಾತು…
ರ:ಡಾ.ವೀಣಾ ಎನ್ ಸುಳ್ಯ
ನನ್ನಯ ಮಾತಿಗೆ ನಿನ್ನಯ ನಗುವನ್ನು
ಬೆರೆಸುತ್ತಾ ಕುಳಿತಿದ್ದೆ ಹೊಲದಾಗ
ನಿನ್ನಯ ಮಾತನ್ನು ಕೇಳುತ್ತ ಒರಗುತ್ತ
ಜಗವನ್ನೇ ಮರೆತಿದ್ದೆ ಓ! ನಲ್ಲೇ
ತಂಪಾದ ನೆರಳಲ್ಲಿ ಜೊತೆಯಲ್ಲಿ ನೀನಿಲ್ಲಿ
ಸಗ್ಗವು ಧರೆಯೊಳು ಇಳಿದಂತೆ
ಹಸಿರಿನ ಹೊಲದಲ್ಲಿ ಮೆಲುವಾಗಿ ಬಳುಕುವ
ಲತೆಯಂತೆ ಕಾಣುವೆ ಓ! ನಲ್ಲೇ
ಹೊಲದಲ್ಲಿ ಬೀಜವ ಬಿತ್ತುತ್ತ ನಡೆದಾಗ
ಹಾಡಿದ ಹಾಡನ್ನು ಕೇಳುತ್ತಾ
ನಿನ್ನಯ ಹಾಡಿಗೆ ನನ್ನಯ ಮನವದು
ಸುಖದಲ್ಲಿ ಕುಣಿದಿತ್ತು ಓ!ನಲ್ಲೇ
ಸರಸದ ಮಾತಲ್ಲಿ ವಿರಸವ ಮರೆಸುತ್ತ
ಬಾಳಿನ ರಥವನ್ನು ನಡೆಸೋಣ
ನಿನ್ನೆಯ ಕತೆಗಳು ನಾಳಿನ ವ್ಯಥೆಗಳ
ತರಬೇಡ ಮಾತಲ್ಲಿ ಓ! ನಲ್ಲೆ