‘ಪಗಪು’ ತುಳು ನಾಟಕ ಉದ್ಘಾಟನೆ…
ನಾಟಕದ ಮೂಲಕ ಸೌಹಾರ್ದದ ಪರಂಪರೆ ಬೆಸೆಯೋಣ : ಪುಂಡರೀಕಾಕ್ಷ...

ಮಂಗಳೂರು : ತುಳುನಾಡಿನ ಗತಕಾಲದ ಸೌಹಾರ್ದದ ಬದುಕು ಹಾಗೂ ಕಥನಗಳು ಎಲ್ಲರಿಗೂ ಗೊತ್ತಿವೆ, ಆದರೆ ಮುಂದಿನ ಪೀಳಿಗೆಗೆ ಸೌಹಾರ್ದತೆಯನ್ನು ಸಾರುವ ಕಾರ್ಯ ಆಗಬೇಕಿದೆ, ಈ ನಿಟ್ಟಿನಲ್ಲಿ ನಾಟಕ ಹಾಗೂ ಸಾಂಸ್ಕೃತಿಕ ರೂಪಕಗಳು ಹೆಚ್ಚು ಪರಿಣಾಮಕಾರಿಯಾಗುವುದು ಎಂದು ಜಿಎಸ್ಟಿ-ಆದಾಯ ತೆರಿಗೆ ಸಲಹೆಗಾರ ಯು.ಪುಂಡರೀಕಾಕ್ಷ ಮೂಲ್ಯ ಅವರು ಹೇಳಿದರು.
ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿರ್ಮಿಸಿದ, ಪಡೀಲ್ ಅಮೃತ ಕಾಲೇಜ್ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ಪಗಪು’ ತುಳು ನಾಟಕದ ಪ್ರಥಮ ಪ್ರದರ್ಶನವನ್ನು ಬಲ್ಮಠ ಸರಕಾರಿ ಪಿ.ಯು ಕಾಲೇಜಿನಲ್ಲಿ ಉದ್ಘಾಟಿಸಿ ಮಾತನಾಡಿದರು.
ಜಾತಿ, ಮತ, ಭೇದವನ್ನು ಮರೆತು ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ತುಳು ಭಾಷೆಗೆ ಇದೆ. ತುಳುವಿನ ಮೂಲಕ ನಾವೆಲ್ಲರೂ ಒಗ್ಗಟ್ಟನ್ನು ಮತ್ತು ಬಾಂಧವ್ಯವನ್ನು ಬೆಸೆಯೋಣ ಎಂದು ಪುಂಡರೀಕಾಕ್ಷ ಅವರು ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಇಂಟ್ಯಾಕ್ ಮಂಗಳೂರು ಘಟಕದ ಸಂಚಾಲಕ ಸುಭಾಶ್ ಬಸು, ಅಮೃತ ಕಾಲೇಜ್ ಪ್ರಾಂಶುಪಾಲರಾದ ಡಾ.ಚಂದ್ರಹಾಸ ಕಣ್ವತೀರ್ಥ, ಬಲ್ಮಠ ಸರಕಾರಿ ಪಿ.ಯು ಹೆಣ್ಮಕ್ಕಳ ಕಾಲೇಜಿನ ಪ್ರಾಂಶುಪಾಲರಾದ ವನಿತಾ ದೇವಾಡಿಗ ಶುಭ ಕೋರಿ ಮಾತನಾಡಿದರು.
ನಾಟಕದ ನಿರ್ದೇಶಕ ಜಗನ್ ಪವಾರ್ ಬೇಕಲ್ ಸ್ವಾಗತಿಸಿ ನಿರೂಪಿಸಿದರು. ಅಕಾಡೆಮಿ ಸದಸ್ಯ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ ವಂದಿಸಿದರು.