ಕೃಷ್ಣ ಮೃಗ ಮಾರಾಟ ಮಾಡುವ ಬೃಹತ್ ಜಾಲ ಪತ್ತೆ…
ಮಂಗಳೂರು: ಕೃಷ್ಣಮೃಗದ ಚರ್ಮ, ಕೊಂಬು ಮತ್ತು ಜೀವಂತ ಕೃಷ್ಣ ಮೃಗವನ್ನು ಮಾರಾಟ ಮಾಡುವ ಬೃಹತ್ ಜಾಲ ಪತ್ತೆ ಮಾಡಿದ ಮಂಗಳೂರು ಅರಣ್ಯ ಸಂಚಾರ ದಳ ಪೋಲೀಸರು ಕೊಪ್ಪಳ ಜಿಲ್ಲೆಯ ಆರು ಮಂದಿ ಆರೋಪಿಗಳನ್ನು ಬಂಧಿಸಿ, ಜೀವಂತ ಕೃಷ್ಣ ಮೃಗದ ಮರಿ ಹಾಗೂ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತುಗ್ಲೇಪ್ಪ, ಶರಣಪ್ಪ ಅಮರಪ್ಪ ಚೌಹಾಣ, ಮಲ್ಲಯ್ಯ ಹೀರೆಮಠ, ಶಿವಯ್ಯ ಹೀರೆಮಠ, ಸಂಗಪ್ಪ ಕಟ್ಟೀಮನಿ, ಹನುಮಂತ ಕಟ್ಟೀಮನಿ ಬಂಧಿತ ಆರೋಪಿಗಳು.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದ ಮುರಡಿ ಸಮೀಪ ಹುಣಸಿಹಾಳ ಕ್ರಾಸ್ ಎಂಬಲ್ಲಿ ದಾಳಿ ಮಾಡಿ ಮೋಟಾರು ಸೈಕಲಿನಲ್ಲಿ ಕೃಷ್ಣ ಮೃಗದ ಚರ್ಮ, ಕೊಂಬು ಮತ್ತು ಜೀವಂತ ಕೃಷ್ಣ ಮೃಗವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರ ಕೈಯಿಂದ 3 ಮೋಟಾರು ಸೈಕಲ್, 20 ಕೃಷ್ಣ ಮೃಗದ ಚರ್ಮಗಳು, 1 ಜೀವಂತ ಕೃಷ್ಣ ಮೃಗದ ಮರಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಮುಂದಿನ ತನಿಖೆಯ ಬಗ್ಗೆ ಪ್ರಕರಣವನ್ನು ಕೊಪ್ಪಳ ವಲಯ ಅರಣ್ಯಾಧಿಕಾರಿಯವರಿಗೆ ಹಸ್ತಾಂತರಿಸಲಾಗಿದೆ.
ಈ ಕಾರ್ಯಚರಣೆಯಲ್ಲಿ ಸಿ.ಐ.ಡಿ. ಬೆಂಗಳೂರು ಅರಣ್ಯ ಘಟಕದ ಡಿ.ಜಿ.ಪಿ. ಡಾ. ರವೀಂದ್ರನಾಥ್, ಪೊಲೀಸ್ ಅಧೀಕ್ಷಕ ಸುರೇಶ್‍ಬಾಬು, ಸಿ.ಐ.ಡಿ. ಅರಣ್ಯ ಘಟಕ, ಮಡಿಕೇರಿಯವರ ಮಾರ್ಗದರ್ಶನದಲ್ಲಿ ಮಂಗಳೂರು ಅರಣ್ಯ ಸಂಚಾರಿ ದಳದ ಪುರುಷೋತ್ತಮ ಎ. ಪೊಲೀಸ್ ಉಪನಿರೀಕ್ಷಕರಾದ ಜಗನ್ನಾಥ ಶೆಟ್ಟಿ, ಪ್ರವಿಣ್, ಶಿವಾನಂದ, ಉದಯ ನಾಯ್ಕ, ಮಹೇಶ, ಜಗದೀಶ ಸಾಲ್ಯಾನ್ ಪಾಲ್ಗೊಂಡಿದ್ದರು.