ಕಲಾಂ ಅವರ ದೃಷ್ಟಿಯಲ್ಲಿ 2020ರಲ್ಲಿ ಭಾರತ – ಉಪನ್ಯಾಸ….
ಪುತ್ತೂರು: ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿದ್ದು ದೇಶ ಕಂಡ ಶ್ರೇಷ್ಠ ವಿಜ್ಞಾನಿ, ಉನ್ನತ ಹುದ್ದೆಯಲ್ಲಿದರೂ ಜನಸಾಮಾನ್ಯರೊಂದಿಗೆ ಮಕ್ಕಳೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಸರಳ ಬದುಕು ಎಲ್ಲರಿಗೂ ಮಾದರಿ ಎಂದು ಬೆಂಗಳೂರಿನ ಡಿ ಆರ್ ಡಿ ಒ ಸಂಸ್ಥೆಯ ವಿಭಾಗೀಯ ಸಾರ್ವಜನಿಕ ಸಂಪರ್ಕಾಧಿಕಾರಿ ನಿವೃತ್ತ ವಿಜ್ಞಾನಿ, ಕಲಾಂ ಅವರ ವಿಂಗ್ಸ್ ಆಫ್ ಫೈರ್ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ
ಜಯಪ್ರಕಾಶ್ ರಾವ್ ಕುದುಕ್ಕುಳಿ ಅವರು ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಚಾರಿತ್ರ್ಯ ನಿರ್ಮಾಣದ ವೇದಿಕೆ ವಿವೇಕ ಸಂಕಲ್ಪದ ಆಶ್ರಯದಲ್ಲಿ ನಡೆದ ಕಲಾಂ ಅವರ ದೃಷ್ಟಿಯಲ್ಲಿ 2020ರಲ್ಲಿ ಭಾರತ ಎನ್ನುವ ವಿಷಯದ ಬಗ್ಗೆ ಮಾತಾಡಿದರು. ಕಲಾಂ ಅವರ ಪ್ರಕಾರ ತಾಂತ್ರಿಕತೆಯೆನ್ನುವುದು ರಾಷ್ಟ್ರವೊಂದರ ಮೂಲ ಶಕ್ತಿ. ತಾಂತ್ರಿಕತೆ ಬೆಳೆದಂತೆ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಇದರಿಂದ ದೇಶದ ಒಟ್ಟಾರೆ ಆರ್ಥಿಕ ಸ್ಥಿತಿ ಸುಧಾರಿಸುವುದರೊಂದಿಗೆ ಜನರ ಜೀವನ ಮಟ್ಟವು ಸುಧಾರಿಸುತ್ತದೆ ಎಂದರು. ಕೈಗಾರಿಕೆಗಳು ಮತ್ತು ಶಿಕ್ಷಣ ಸಂಸ್ಥೆಗಳು ನಿರ್ಧಿಷ್ಟ ಗುರಿ ಹಾಗೂ ದೃಷ್ಟಿಕೋನದಿಂದ ಜತೆ ಜತೆಯಾಗಿ ಕೆಲಸಮಾಡಿದರೆ ದೇಶದ ಆರ್ಥಿಕತೆಯು ಉಜ್ವಲವಾಗಿ ಬೆಳೆಯುತ್ತದೆ ಎಂದರು. ಇದು ಹಾಗೆಯೇ ಮುಂದುವರಿದರೆ ತಾಂತ್ರಿಕತೆ ಹಾಗೂ ಪಠ್ಯಕ್ರಮದ ಮಧ್ಯೆ ಇರುವ ಅಗಾಧ ಅಂತರವನ್ನು ಕಡಿಮೆ ಮಾಡುವುದರ ಜತೆಯಲ್ಲಿ ಭವಿಷ್ಯದ ಜನಾಂಗವನ್ನು ಈ ಸಮಸ್ಯೆಯಿಂದ ಪಾರುಮಾಡಬಹುದು ಎಂದರು. ಡಿ ಆರ್ ಡಿ ಒ ದಲ್ಲಿ ಕಲಾಂ ಅವರ ಜತೆಗಿನ 7 ವರ್ಷಗಳ ಒಡನಾಟವನ್ನು ಸ್ಮರಿಸಿದ ಅವರು ಅಂತಹ ಮಹಾನ್ ವ್ಯಕ್ತಿಯ ಜತೆಗೆ ಕೆಲಸಮಾಡುವುದೇ ಒಂದು ಸೌಭಾಗ್ಯ ಎಂದರು. ಪಿಎಸ್‍ಎಲ್‍ವಿ, ಪೋಕ್ರಾಣ್ ಅಣು ಪರೀಕ್ಷೆ, ಹಗುರ ಯುದ್ಧ ವಿಮಾನಗಳ ತಯಾರಿಯಂತಹ ಮಹತ್ವಾಕಾಂಕ್ಷಿ ಯೋಜನೆಗಳು ಕಲಾಂ ಅವರ ಕನಸಿನ ಕೂಸಾಗಿದ್ದವು ಎಂದರು. ಕಲಾಂ ಅವರ ಆಶಯಗಳನ್ನು ಗಮನದಲ್ಲಿರಿಸಿಕೊಂಡು ಅದರಂತೆ ಕೆಲಸಮಾಡಿದರೆ ಭಾರತವು ವಿಶ್ವಗುರುವಾಗುವುದರಲ್ಲಿ ಸಂದೇಹವಿಲ್ಲ ಎಂದವರು ಅಭಿಪ್ರಾಯಪಟ್ಟರು.
ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಮತ್ತು ವಿವೇಕ ಸಂಕಲ್ಪದ ಸಂಚಾಲಕ ಪ್ರೊ .ಉದಯಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಅನುಶ್ರೀ ಸ್ವಾಗತಿಸಿ, ಆದಿತ್ಯಕೃಷ್ಣಮೂರ್ತಿ ವಂದಿಸಿದರು. ಜೆಸ್ಮಿತಾ ಮಿನೇಜಸ್ ಕಾರ್ಯಕ್ರಮ ನಿರ್ವಹಿಸಿದರು.