ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಶಿಕ್ಷಕರ ದಿನಾಚರಣೆ…

ಪುತ್ತೂರು: ಅಧ್ಯಾಪನ ಎಂಬುದು ಒಂದು ಗೌರವಯುತವಾದ, ಉದಾತ್ತವಾದ ವೃತ್ತಿಯಾಗಿದ್ದು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಮಾಜವು ಶಿಕ್ಷಕರಿಂದ ಬಹಳಷ್ಟನ್ನು ನಿರೀಕ್ಷಿಸುತ್ತಾರೆ ಎಂದು ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರೊ.ಹರೀಶ್ ಶಾಸ್ತ್ರಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ವಿಭಾಗ ಮತ್ತು ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ ಆಶ್ರಯದಲ್ಲಿ ಕಾಲೇಜಿನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಹೇಳುವ ಮಟ್ಟಕ್ಕೆ ಏರಬೇಕಾದರೆ ನಮ್ಮಲ್ಲಿ ಅದಕ್ಕೆ ಬೇಕಾಗುವಷ್ಟು ಜ್ಞಾನವಿರಬೇಕು ಹಾಗಾಗಿ ಸೂಕ್ತ ಸಿದ್ದತೆಯೊಂದಿಗೆ ಪಾಠ ಪ್ರವಚನವನ್ನು ಪ್ರಾರಂಭಿಸಬೇಕು. ವಿದ್ಯಾರ್ಥಿಗಳು ಅಧ್ಯಾಪಕರನ್ನು ತಮ್ಮ ಮಾದರಿ ವ್ಯಕ್ತಿಯನ್ನಾಗಿ ಪರಿಗಣಿಸುವುದರಿಂದ ಕಠಿಣ ಪರಿಶ್ರಮದ, ಸಮಯಪಾಲನೆಯುಳ್ಳ ಆದರ್ಶ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಶಿಕ್ಷಕರಾದ ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುತ್ತಾ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಮಾತನಾಡಿ ವಿದ್ಯಾರ್ಥಿಗಳಿಗೆ ಸೂಕ್ತ ಜವಾಬ್ಧಾರಿಗಳನ್ನು ನೀಡುವ ಮೂಲಕ ಅವರನ್ನು ಸರಿದಾರಿಗೆ ತರಬಹುದು ಎಂದರು. ಕೆಲವು ವಿದ್ಯಾರ್ಥಿಗಳು ಬಹಳ ಕಷ್ಟಪಟ್ಟು ವಿದ್ಯಾರ್ಜನೆಗೆ ಬರುತ್ತಾರೆ. ಅಂತಹ ವಿದ್ಯಾರ್ಥಿಗಳ ಏಳಿಗೆಯಿಂದ ಇಡೀ ಕುಟುಂಬವೇ ಉದ್ಧಾರವಾಗುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಗೆ ಅಧ್ಯಾಪಕರು ಕಟಿಬದ್ಧರಾಗಬೇಕೆಂದು ಹೇಳಿದರು.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ, ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಪ್ರೊ.ಕೃಷ್ಣಮೋಹನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದ ಪ್ರಾಧ್ಯಾಪಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವಿದ್ಯಾರ್ಥಿನಿಯರಾದ ಯಶ್ವಿತಾ ಸ್ವಾಗತಿಸಿ, ವರ್ಷಿತಾ ವಂದಿಸಿದರು. ಸಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು.

